ಎರಡು ಸಾಲುಗಳು

ಆ ಎರಡು ಸಾಲುಗಳು
ಎಷ್ಟು ನೆನೆದರು ನೆನಪಿಗೆ ಬರುತ್ತಿಲ್ಲ
ಯಾರು ಎಲ್ಲಿಗೆ ಕರೆದೊದರೊ?
ಎಲ್ಲಿ ಕಷ್ಟಗಳುನುಭವಿಸುತ್ತಿವೆಯೋ?
ಯಾವ ಧುರುಳರಡಿಯಲಿ ಸಿಲುಕಿ ನರಳುತ್ತಿವೆಯೋ? ಅರಿಯೆ…

ಕರೆದೊದರೊ, ಕದ್ದೊದರೋ,
ಒದ್ದೋದರೋ, ತುಳಿದೊದರೊ, ಗೊತ್ತಿಲ್ಲ.
ಆ ಸಾಲುಗಳ ಕಣ್ಮರೆಗೆ ಅಲ್ಲಿರುವ ದೊರೆಯೇ,
ಅವನ ಭಕ್ತರೇ ಕಾರಣ ಎಂಬ ಆ
ಹುಚ್ಚನ ಪಠಣ ಯಾರು ಕೇಳಿಯಾರು?
ಪೊಲೀಸರೂ, ಹುಚ್ಚರಾಗುವ ಬದಲು ಭಕ್ತರಾಗಿರುವುದನ್ನು
ಸಾರಿ ಸಾರಿ ಹೊಗಳಿದ ಯೋಗಿಯೊಬ್ಬ…

ಹೀಗಿರುವಾಗ, ಅಲ್ಲೆಲ್ಲೋ….
ಹುಣ್ಣಿಮೆ ಬೆಳಕ ಮರೆಯಲ್ಲಿ
ನಿಂತ ಪ್ರೀತಿ ಅತ್ತಿತ್ತ ನೋಡುತ್ತಾ,
ಕಣ್ಣು ಮಿಟಿಕಿಸುತ್ತ, ಪೊಲೀಸರ ಕಣ್ತಪ್ಪಿಸಿ,
ಆ ಎರಡು ಸಾಲುಗಳ ಹುಡುಕುತ್ತಿತ್ತು.

– ವಿಶ್ವಕೀರ್ತಿ

Advertisements

ಯುದ್ದ

ಅವನು ಗಡಿಗೆ ಹೊರಟನು;
ಇವಳು ಗುಡಿಗೆ ಹೋದಳು.
ಅವನು ದೇಶಕ್ಕಾಗಿ ಪ್ರಾಣ ನೀಡಲು ಹೊರಟನು;
ಇವಳು ದೇಶಕ್ಕಾಗಿ ಶಾಂತಿ ಜಪಿಸಲು ಹೋದಳು.
ಅವನು ರಾತ್ರಿ ಹಗಲೆನ್ನದೆ ಗಡಿ ಕಾಯಲು ಪಣತೊಟ್ಟನು;
ಇವಳು ಗುಡಿಯಿಂದ ಮನೆಗೆ ಬಂದಳು.

ಅವನಿದ್ದ ಗಡಿಯಿಂದ ಬಂತು,
ವೀರ ಮರಣದ ಸುದ್ದಿ; ಸುದ್ದಿ ಕೇಳಲಾಗದೆ
ಇವಳು ಮತ್ತೊಮ್ಮೆ ಗುಡಿಗೆ ಹೋದಳು.
ಗುಡಿಯ ದೇವರ ಕಣ್ಣಲ್ಲಿ ನೀರು ಜಿನುಗಿತ್ತು;
ಕೇಳಿದಳು, ಏಕೆ ನನ್ನ ಶಾಂತಿಯ ಜಪ ಮನ್ನಿಸಿದೆ?

ಅದಕ್ಕೆ, ದೇವರು ಗದ್ಗದಿಸಿದನು;
ಗಡಿಯ ಸೃಷ್ಟಿ ನಾನಲ್ಲ,
ನೋಡಲಾರೆ ನನ್ನ ಮಕ್ಕಳ “ಸಾವನ್ನು”, ಹೀಗೆ.
ಈಗ ನಾನು ನಿನ್ನಷ್ಟೇ ದುಃಖಿತನು;
ಹುಡುಕುತ್ತಿರುವೆ, ಇದೇಕ್ಕೆಲ್ಲ ಕಾರಣರಾರೆಂದು?

ಲೋಕ ಸೃಷ್ಟಿ ಕರ್ತನ ಆ ಮಾತು ಕೇಳಿ ನಕ್ಕಳು.
ದೇವರಿಗೆ ದುಃಖ ಇನ್ನಷ್ಟು ಉಮ್ಮಳಿಸಿ ಬಂತು;
ಅಷ್ಟರಲ್ಲಿ-
ವೀರ ಮರಣವ ಸಾವೆಂದವನನ್ನು ಕೊಲ್ಲಲು;
ಬರುತ್ತಿರುವ ಭಕ್ತರನ್ನು ಕಂಡಳು; ದೇವರನ್ನು ಉಳಿಸಲು;
ಇವಳೇ ಗಡಿಯ (ಗುಡಿಯ) ಕಾದಳು,
ಮತ್ತೊಮ್ಮೆ, ಶಾಂತಿ ಮಂತ್ರವ ಜಪಿಸಿದಳು…

ಅವಳ ಮನೆಯಲ್ಲಿ, ಗಡಿಯಿಂದ ಬಂದಿದ್ದ,
ಬಾವುಟ ಸುತ್ತಿದ ಅವನ ಕಳೆಬರಹ
ಇವಳಿಗಾಗಿ ಕಾದಿತ್ತು.


ವಿಶ್ವ ಕೀರ್ತಿ ಎಸ್

ಉಗ್ರತ್ವ

ಹೌದು
ನಾವು ಕೊಂದೆವು;
ವಿಮಾನದಲ್ಲಿ ಹೋಗಿ
ಹಿಂದೆಂದೂ ಕಂಡರಿಯದಂತೆ ಅವರನ್ನ ಕೊಂದೆವು.
ಮುಲಾಜಿಲ್ಲದೆ ಸೂರ್ಯನ ಬೆಳಕು
ಬೀಳುವ ಮುಂಚೆಯೇ ಅವರ ಜಾಗದಲ್ಲೇ
ಅವರನ್ನು ಕೊಂದೆವು, ಆದರೆ ಏಣಿಕೆ ಇಟ್ಟಿಲ್ಲ!

ಮಿರಜ್ಗಳಿಂದಿಳಿದ ಮದ್ದುಗಳು;
ನೂರಾರು ಉಗ್ರರ ತಲೆಗಳನ್ನೂರುಳಿಸಿತಂತೆ.
ಮುಯ್ಯಿಗೆ ಮುಯ್ಯಿ ಅಂತೆ;
ಸೇಡಿಗೆ ಸೇಡಂತೆ;
ರಕ್ತಕ್ಕೆ ರಕ್ತವಂತೆ;
ಎಂದು ಬಣ್ಣಿಸದವು
ಮಾಧ್ಯಮ ಯೋದರು!

ಹೌದು
ನಾವು ಕೊಂದಿರುವುದು
ಪಾಪಿ ಉಗ್ರರನ್ನ, ಲೆಕ್ಕವಿಲ್ಲದಷ್ಟು
ಮದ್ದಿರುವುದು, ಇನ್ನು ಸಾವಿರ
ಸಾವಿರ ಉಗ್ರರ ಕೊಲ್ಲಲು!

ಆದರೆ, ಉಗ್ರತ್ವವನ್ನು ಕೊಲ್ಲುವುದು ಯಾವಾಗ?
ಇದನ್ನು ಕೊಲ್ಲುವ ಮಿರಜ್ಗಳು ಯಾವ ಸೇನೆಯಲ್ಲಿದೆ?
ಇದಕ್ಕೆ ಬೇಕಾಗುವ ಮದ್ದು ಗುಂಡುಗಳನ್ನು ಏಲ್ಲಿ,
ಯಾವ ದೇಶದಲ್ಲಿ ತುಂಬಿಸಿಡಲಾಗಿದೆ?
ಮನುಕುಲವ ಉಳಿಸುವ ಯುದ್ಧ ಯಾರಿಗೂ ಬೇಡವಾಯಿತೆ?

ಇದ ಹುಡುಕುವ ದಾರಿಯಲ್ಲಿ
ಸಿಕ್ಕನು ಈ ‘ಚಾಮ್ಸ್ಕಿ’!
ಮುಂದೆ?

53532488_2272293939481678_3036908406486073344_o


ವಿಶ್ವಕೀರ್ತಿ ಎಸ್‌
05.03.2019