ಕನ್ನಡ ಸಾಹಿತ್ಯ ವಿದ್ಯಾರ್ಥಿಗಳ ಕುರಾನ್

first 1

Second 2

Advertisements

ನಾ ಕಂಡ “ಮಲೆಗಳಲ್ಲಿ ಮದುಮಗಳು”

ಇಲ್ಲಿ ಯಾರು ಮುಖ್ಯರಲ್ಲ; ಯಾರು ಅಮುಖ್ಯರಲ್ಲ, ಯಾವುದು ಯಕ:ಶ್ಚಿತವಲ್ಲ, ಇಲ್ಲಿ ಯಾವುದಕ್ಕೂ ಮೊದಲಿಲ್ಲ, ಯಾವುದಕ್ಕು ತುದಿಇಲ್ಲ, ಇಲ್ಲಿ ಅವಸರವು  ಸಾವದಾನದ ಬೆನ್ನೇರಿದೆ, ಇಲ್ಲಿ ಎಲ್ಲಕ್ಕೂ ಇದೆ ಅರ್ಥ, ಯಾವುದು ಅಲ್ಲ ವ್ಯರ್ಥ. ನೀರೆಲ್ಲವು ತೀರ್ಥ, ತೀರ್ಥವು ನೀರೇ.

     ಇದು ಕುವೆಂಪುರವರು ಈ ಕಾದಂಬರಿಯ ಮೊದಲ ಪುಟದಲ್ಲಿ ಬರೆದ ಸಾಲುಗಳು.  ಅದರ ಅರ್ಥ ಎಷ್ಟು ದೊಡ್ಡದು ಎನ್ನುವುದನ್ನು ಮತ್ತೊಮ್ಮೆ ಮಗದೊಮ್ಮೆ ನೀವೇ ಓದಿ ನೋಡಿ, ತಿಳಿಯುತ್ತದೆ.  ನನ್ನ ಪ್ರಕಾರ ಇವು  ಅದ್ಬುತ ಸಾಲುಗಳು.

     ಎಪ್ಪತ್ತರ ದಶಕದಲ್ಲಿ “ಶ್ರೀ ರಾಮಾಯಣ ದರ್ಶನಂ” ರಚಿಸಿದ ಕುವೆಂಪುರವರು, ತದನಂತರ ರಚಿಸಿದ್ದು ಕನ್ನಡದ ಮಹಾಕಾವ್ಯಗಳಲ್ಲಿ ಒಂದಾದ “ಮಲೆಗಳಲ್ಲಿ ಮದುಮಗಳು”. ಮಲೆನಾಡಿನ ಜನರ ಜೀವನ ಶೈಲಿ, ಅವರ ಮೂಡನಂಬಿಕೆ, ಜಾತಿ, ಮತ, ಧರ್ಮ, ಹೆಣ್ಣಿನ ಶೋಷಣೆ ಎಲ್ಲವನ್ನೂ ನೈಜ ರೂಪದಲ್ಲಿ ಈ ಕಾದಂಬರಿಯಲ್ಲಿ ಚಿತ್ರಿಸಿದರು.  ಇಂದಿಗೂ ಇದು ತುಂಬಾ ಜನಪ್ರಿಯವಾದ ಕಾದಂಬರಿ.  ಇತ್ತೀಚೆಗೆ ಬೆಂಗಳೂರಿನ ಕಲಾಗ್ರಾಮದಲ್ಲಿ ನೆಡೆದ ಈ ನಾಟಕವು ನಿಜವಾಗಲೂ ಮೇಲಿನ ಮಾತನ್ನು ಪುಶ್ಟಿಕರಿಸಿತ್ತು.

     ಈ ನಾಟಕವು ಕರ್ನಾಟಕದ ಸಾಂಸ್ಕೃತಿಕ ಲೋಕದಲ್ಲೇ ಒಂದು ವಿಶಿಷ್ಟವಾದ ಪ್ರಯೋಗ ಎಂದರೆ ತಪ್ಪಾಗಲಾರದು.  ಸುಮಾರು 700 ಪುಟಗಳಿರುವ ಕಾದಂಬರಿಯನ್ನು ಡಾ. ಕೆ. ವೈ. ನಾರಾಯಣಸ್ವಾಮಿಯವರು ರಂಗರೂಪಕ್ಕೆ ತಂದಿದ್ದರು (ಇವರು ನನಗೆ ಪದವಿಯ ತರಗತಿಯಲ್ಲಿ ಕನ್ನಡ ಮೇಷ್ಟ್ರು ಆಗಿದ್ದರು).  ನಿರ್ದೇಶಿಸಿದ್ದು ಸಿ. ಬಸವಲಿಂಗಯ್ಯ ನವರು. ಇದಕ್ಕೆ ಹಂಸಲೇಖರವರು ಸಂಗೀತ ಕೊಟ್ಟಿದ್ದರು.  ಇದಲ್ಲದೆ ಅದ್ಬುತವಾದ ರಂಗಸಜ್ಜಿಕೆಯು ಈ ನಾಟಕದ ಮತ್ತೊಂದು ವಿಶೇಷ.  ಒಂದಲ್ಲ, ಎರಡಲ್ಲ, ಬರೋಬ್ಬರಿ ನಾಲ್ಕು ಬಯಲು ರಂಗ ಮಂದಿರವನ್ನು ನಾಟಕಕ್ಕೆ ಬೇಕಾಗುವಂತೆ ನಿರ್ಮಿಸಲಾಗಿತ್ತು.  ಇದರಲ್ಲಿ “ಕೆರೆ ಅಂಗಳ” ಬಯಲು ರಂಗವನ್ನು ಕಣ್ಣಿಗೆ ರಸದೌತಣವಾಗುವಂತೆ ನಿರ್ಮಿಸಿದ್ದರು.  ತಾತ್ಕಾಲಿಕವಾದ ಕೆರೆ, ಸೇತುವೆ, ಮನೆ, ಮರ, ಎಲ್ಲವನ್ನೂ ಕಟ್ಟಲಾಗಿತ್ತು.  ಇದೆಲ್ಲವನ್ನು “ಕರ್ನಾಟಕ ಕಲಾಗ್ರಾಮ” ಜ್ಞಾನಭರತಿ ಹಿಂಬಾಗದ ಆವರಣದಲ್ಲಿ ನಿರ್ಮಿಸಲಾಗಿತ್ತು.  ಇತರಹದ ನೈಜ ರಂಗ ಮಂದಿರದಲ್ಲಿ ನಾನು ನಾಟಕ ನೋಡಿದ್ದು ಮೊದಲನೆಬಾರಿ.

     ನಾಟಕವು ರಾತ್ರಿ ಪೂರಾ ಅಂದರೆ, ಸುಮಾರು 9 ಗಂಟೆಗಳ ವಿಶಿಷ್ಟ ಪ್ರಯೋಗವಾಗಿತ್ತು.  ಒಂದು ತಿಂಗಳು ಪೂರ್ತಿ (ದಿನ ಬಿಟ್ಟು ದಿನ) ನೆಡೆದ ನಾಟಕಕ್ಕೆ, ನನ್ನ ಕೆಲಸದ ಬಿಡುವಿನಲ್ಲಿ ಎರಡು ಬಾರಿ ಹೋಗಲು ಅವಕಾಶ ಸಿಕ್ಕಿತು.  ಮತ್ತೊಂದು ಬಾರಿ ಹೋಗೋಕ್ಕೆ ಟಿಕ್ಕೆಟು ಸಿಗಲಿಲ್ಲ.  ಒಂದೇ ಮಾತಲ್ಲಿ ಹೇಳೋದಾದ್ರೆ ನಾನು ಕಂಡ ಒಂದು ಅದ್ಬುತ ನಾಟಕ. ಒಟ್ಟು 74 ಕಲಾವಿದರು ನಟಿಸಿದ್ದ ನಾಟಕದಲ್ಲಿ, ಎಲ್ಲರ ಪ್ರದರ್ಶನವು ಅದ್ಬುತವಾಗಿ ಮೂಡಿಬಂದಿತ್ತು.  ನಾಟಕದಲ್ಲಿ ಬರುವ ಗುತ್ತಿ, ಹುಲಿಯ, ಐತ, ಪಿಚುಲು, ತಿಮ್ಮಿ, ವೆಂಕಣ್ಣಗೌಡ ಪಾತ್ರವನ್ನು ಮರೆಯಲು ಸಾದ್ಯವಿಲ್ಲ.  ಒಟ್ಟು 41 ಹಾಡುಗಳುನ್ನು ನಾರಾಯಣಸ್ವಾಮಿ ಅವರು ಈ ನಾಟಕಕ್ಕೆಂದೆ ರಚಿಸಿದ್ದರು. ಈಗಲೂ ಆ ಹಾಡುಗಳನ್ನೇ ಇನ್ನೂ ಕೇಳುತ್ತಿರುವೆ.  ಹಾಗೆಯೇ ಈ ನಾಟಕವು ಸಮಾಜದಲ್ಲಿ ಇರುವ ಜಾತಿ, ಮತ, ಧರ್ಮ, ‘ಗಳಿಂದ ಊಂಟಾಗುವ ಮೂಡನಂಬಿಕೆ ಇದರಿಂದಗುವ ಪರಿಣಾಮವನ್ನು ನಮ್ಮ ಕಣ್ಣೆದುರೆ ತಂದು ನಿಲ್ಲಿಸುತ್ತದೆ.  ಇಂದಿಗೂ ಚಾಲ್ತಿಯಲ್ಲಿರುವ (ಹೆಚ್ಚಾಗಿ ಹಳ್ಳಿಯ ಕಡೆ) ಇಂತಹ ಮೂಡನಂಬಿಕೆ, ಶೋಷಣೆಯ ವಿರುದ್ದ ಯೋಚನೆ ಮಾಡಬೇಕೆಂಬ ಅಂಶವನ್ನು ನಮ್ಮಲ್ಲಿ ಬಿತ್ತುತದೆ.

     ಒಟ್ಟಾರೆ ಹೇಳೋದಾದರೆ, ಈ ನಾಟಕವು ಮಲೆನಾಡಿನ ನೈಸರ್ಗಿಕ ಭಾಷೆಯ ಪ್ರೀತಿ, ವಾತ್ಸಲ್ಯ, ಹಾಸ್ಯ, ಬೈಗುಳ, ಮಲೆನಾಡಿನ ಸೌಂದರ್ಯ ಎಲ್ಲವನ್ನೂ ತನ್ನೊಳಗೆ ಚಿತ್ರಿಸಿಕೊಂಡಿತ್ತು.  ಒಂಬತ್ತು ಗಂಟೆ, ನಾಲಕ್ಕು ಬಯಲು ರಂಗದಲ್ಲಿ ನೋಡಿದ ನಾಟಕವು, ನನಗೆ ಒಂದು ಮರೆಯಲಾರದ ಅನುಭವ ನೀಡಿತು.  ನನ್ನ ಮಟ್ಟಿಗೆ, ಇದು ನಾನು ಕಂಡ ಒಂದು ಅದ್ಬುತ ನಾಟಕ.  ಈ ನಾಟಕವನ್ನು ಕನ್ನಡದ ಜನತೆಯ ಮುಂದಿಟ್ಟ ನಿರ್ದೇಶಕರಿಗೆ, ನನ್ನ ಮೇಷ್ಟ್ರಿಗೆ, ಕಲಾವಿದರಿಗೆ, ತಾಂತ್ರಿಕವರ್ಗದವರಿಗೆ, ಎಲ್ಲರಿಗೂ ಇಲ್ಲಿಂದಲೆ ನನ್ನದೊಂದು ಸಲಾಮ್.

     ನಾಟಕಕ್ಕೆ ಎರಡನೇ ಬಾರಿ ಹೋದಾಗ, ನನ್ನ ಜೊತೆಗೆ ನನ್ನ ಕ್ಯಾಮರಾವನ್ನು ಕರೆದುಕೊಂಡು ಹೋಗಿದ್ದೆ. ಆ ಕ್ಯಾಮರಾ ಕಂಡ “ಮಲೆಗಳಲ್ಲಿ ಮದುಮಗಳು” ಇಲ್ಲಿದೆ.

ಈ ನಾಟಕವು ಏಪ್ರಿಲ್ 18, 2013 ರಿಂದ  ಜೂನ್ 3, 2013 ವರೆಗೂ ನೆಡೆದಿತ್ತು.

– ವಿಶ್ವ ಕೀರ್ತಿ. ಏಸ್, ಜೂನ್ 26, 2013.