“ಕವಿಶೈಲ”ದಲ್ಲೊಂದು ಸುತ್ತು…

ಬಹಳ ತಿಂಗಳಿಂದ ನನಗೊಂದು ಮಹಾದಾಸೆ ಇತ್ತು.  ಅದೇನೆಂದರೆ ಕುಪ್ಪಳಿಗೆ ಹೋಗಿ ಕವಿಮನೆ ಮತ್ತು ಕವಿಶೈಲ ದಲ್ಲಿ ಓಡಾಡಿಕೊಂಡು ಬರಬೇಕು ಅಂತ.  ಎಸ್ಟೋ ಸಾರಿ ಕುಪ್ಪಳಿಗೆ ಹೊಗೋದಕ್ಕೆ ತಯಾರಿ ಮಾಡಿಕೊಂಡರೂ, ಕೊನೆಯಲ್ಲಿ ವೈಯಕ್ತಿಕ ಕಾರಣಗಳಿಂದ ಪ್ರವಾಸ ಮುರಿದುಬಿಳುತಿತ್ತು.  ಕೊನೆಗೆ ನಾನು ನನ್ನ ಸ್ನೇಹಿತ ಕಿರಣ್, ಏನಾದರೂ ಆಗಲಿ ಈ ವಾರ ಶಿವಮೊಗ್ಗಕ್ಕೆ ಪ್ರವಾಸ ಹೋಗಲೇಬೇಕು ಎಂದುಕೊಂಡು, ಎರಡು ದಿನದ ಮಟ್ಟಕ್ಕೆ ಶಿವಮೊಗ್ಗದ ನಕಾಶೆ ತಯಾರು ಮಾಡಿ, ಅದರಲ್ಲಿ ಕುಪ್ಪಳಿಗೆ ಅರ್ದ ದಿನ ಮೀಸಲಿಟ್ಟು ಪ್ರವಾಸಕ್ಕೆ ಹೊರಟೆವು.

IMG_0530
ನಮ್ಮ ಶಿವಮೊಗ್ಗದ ನಕಾಶೆ

ತೀರ್ಥಹಳ್ಳಿಹಿಂದ ಕೇವಲ ಹದಿನೈದು ಕಿಲೋಮೀಟರ್ ಕೊಪ್ಪ ಮಾರ್ಗವಾಗಿ ಹೋದರೆ ಕುಪ್ಪಳಿ ಕ್ರಾಸ್ ಸಿಗುತ್ತದೆ.  ಅಲ್ಲಿಂದ ಎರಡು ಕಿಲೋಮೀಟರ್ ಒಳಗೆ ನೆಡೆದುಕೊಂಡು ಹೋದರೆ ಕುಪ್ಪಳಿ ಸಿಗುತ್ತದೆ.  ಇಲ್ಲಿಯೇ ಇರುವುದು ರಾಷ್ಟ್ರಕವಿ ಕುವೆಂಪುರವರು ತಮ್ಮ ಹದಿನೈದು ವರ್ಷದ ಬಾಲ್ಯವನ್ನು ಕಳೆದ ಮನೆ ಮತ್ತು ಅವರಿಗೆ ಅತ್ಯಂತ ಪ್ರಿಯವಾದ, ತಮ್ಮ ಎಲ್ಲಾ ಮಹಾಕಾವ್ಯ, ಕಾದಂಬರಿ, ಪದ್ಯಗಳಿಗೆ ಸ್ಪೂರ್ತಿ ಕೊಟ್ಟ ಕವಿಶೈಲ ಸ್ಥಳ.

IMG_9973
ಕುಪ್ಪಳ್ಳಿಯ ತಿರುವು

ಪ್ರಪಂಚದ ಹದಿನೆಂಟು ಜೀವ ವೈವಿದ್ಯದ ತಾಣದಲ್ಲಿ ಒಂದಾದ ಸ್ಥಳ ಸಹ್ಯಾದ್ರಿ ಬೆಟ್ಟ, ಅದರ ತಪ್ಪಲಲ್ಲೆ ಇರುವುದು ಕುವೆಂಪುರವರ ಬಾಲ್ಯ ಕಳೆದ ಮನೆ, ಈಗ “ಕವಿಮನೆ” ಯಾಗಿದೆ.  ಇನ್ನೂರು ವರ್ಷ ಹಳೆಯದಾದ ಮನೆಯು, ಮಲೆನಾಡಿನ ಒಬ್ಬ ಜಮೀನ್ದಾರನ ಮನೆಯ ತರಹ ಇದೆ.  ಮಲೆನಾಡಿನ ಸೌಂದರ್ಯವನ್ನು ತನ್ನ ಒಡಲಲ್ಲೆ ಇನ್ನೂರು ವರ್ಷ ಇಟ್ಟುಕೊಂಡಿದ್ದ ಈ ಮನೆಯು ಎಂತವರನ್ನು ಏನನ್ನು ಮಾತನಾಡಿಸದೆ ತನ್ನ ಕಡೆಗೆ ದಿಟ್ಟಿಸುವಂತೆ ಮಾಡುತ್ತದೆ.  ಇಂತಹ ಮನೆಯಲ್ಲಿ ಬೆಳೆದ ಬಾಲ್ಯ ಕುವೆಂಪು ತನ್ನ ಮನೆಯ ಬಗ್ಗೆ ಅವರೇ ಬರೆದಿರುವ ಕಾವ್ಯ, ಅವರ ಈ ಮನೆಯ ಒಡನಾಟ ಎಷ್ಟಿತ್ತೆಂಬುದನ್ನು ಕಣ್ಣಮುಂದೆ ತರಿಸುತ್ತದೆ.

IMG_0029
ತನ್ನ ಮನೆಯ ಬಗ್ಗೆ ಬರೆದಿರುವ ಕವಿತೆ

ರಾಷ್ಟ್ರಕವಿ ಕುವೆಂಪು ಪ್ರತಿಷ್ಟಾನವು ಈ ಮನೆಯನ್ನು, ಅದರ ಮೂಲ ವಿನ್ಯಾಸಕ್ಕೆ ಹಾಳಾಗದಂತೆ ನವೀಕರಿಸಿ, ಒಂದು ವಸ್ತು ಸಂಗ್ರಹಾಲಯವಾಗಿ ಮಾರ್ಪಾಡಿಸಿದೆ.  ಮನೆಯ ಒಳಗೆ ಕುವೆಂಪುರವರು ಕುಪ್ಪಳಿ ಮತ್ತು ಮೈಸೂರಿನಲ್ಲಿ ಇದ್ದಾಗ ಬಳಸುತ್ತಿದ್ದ ವಸ್ತುಗಳು, ಆಗಿನ ಕಾಲದಲ್ಲಿ ಮಲೆನಾಡಿನಲ್ಲಿ ಬಳಸುತ್ತಿದ್ದ ದೊಡ್ಡ ಗಾತ್ರದ ಅಡಿಗೆ ಮನೆಯ ವಸ್ತುಗಳು, ಅವರ ಸಾಹಿತ್ಯ ಭಂಡಾರ, ಅವರ ಪ್ರಶಸ್ತಿಗಳು ಎಲ್ಲವನ್ನೂ ಅಚ್ಚುಕಟ್ಟಾಗಿ ಪ್ರದರ್ಶಿಸಲಾಗಿದೆ.  ಕುವೆಂಪುರವರ ವಿವಾಹದ ಮುದ್ರಿತ ಪತ್ರ ಮತ್ತು ವಿವಾಹ ಮಂಟಪ ಗಮನ ಸೆಳೆಯುವಂತ ವಸ್ತುಗಳಾಗಿವೆ.  ಕುವೆಂಪುರವರ ಕೆಲವು ಕಾದಂಬರಿಗಳ ಮೊದಲ ಮುದ್ರಿತ ಪ್ರತಿಗಳನ್ನು ಪ್ರದರ್ಶಿಸಲಾಗಿದೆ.  ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ “ಶ್ರೀ ರಾಮಾಯಣದರ್ಶನಂ” ಮಹಾಕಾವ್ಯದ ಮೊದಲ ಹಸ್ತಪ್ರತಿ ಇದರಲ್ಲಿ ಪ್ರಮುಖವಾದದ್ದು.  ಕರ್ನಾಟಕ ರತ್ನ, ಪದ್ಮ ವಿಭೂಷಣ, ಜ್ಞಾನಪೀಠ ಪ್ರಶಸ್ತಿ ಪತ್ರಗಳು, ಫಲಕಗಳನ್ನು ಮೊದಲ ಬಾರಿ ಕಂಡ ನನಗೆ, ಒಂದು ಅದ್ಬುತ ಸಾಹಿತ್ಯ ಲೋಕದ ಬಹುದೊಡ್ಡ ಖಜಾನೆಯನ್ನು ಕಂಡ ಉತ್ಸಾಹ ಮೂಡಿತ್ತು.  ಈ ಪ್ರಶಸ್ತಿಗಳಿಗೆ ಕಾರಣವಾಗಿದ್ದ ಕುವೆಂಪುರವರ ಮಹಾಕಾವ್ಯಗಳು, ಅವರಿಗೆ ಕನ್ನಡ ಭಾಷೆಯ ಮೇಲಿದ್ದ ಪ್ರೀತಿ ಎಲ್ಲವೂ ಕಣ್ಣಮುಂದೆ ಬಂದು ಹೊದಂತಾಯಿತು.

IMG_0027
“ಕವಿಮನೆಯ” ವಿಹಂಗಮ ನೋಟ
IMG_0133
ಕವಿಮನೆ
IMG_0129
ಕವಿಶೈಲ ಕಾಲುದಾರಿಯಿಂದ ಕವಿಮನೆ ನೋಟ
IMG_0032
ಕವಿಮನೆಯ ಮುಂದಿನ ಉದ್ಯಾನ

ಮನೆಯಲ್ಲಿದ್ದ ಕುವೆಂಪುರವರ ಅಧ್ಯಯನ ಕೊಠಡಿ, ಅಜ್ಜಯನ ಬಚ್ಚಲು ಮನೆ, ಅವರ ಮೇಜು, ಶಾಲು, ಬಟ್ಟೆ, ಪೆನ್ನು, ಅವರಿಗೆ ಸಂದ ಡಾಕ್ಟರೇಟ್ ಪದವಿಗಳು ಎಲ್ಲವನ್ನೂ ಒಂದಿಂಚು ಬಿಡದೆ ನೋಡಿದೆ.  ತೇಜಸ್ವಿಯವರ ಸಂಗ್ರಹದಲ್ಲಿದ್ದ ಕುವೆಂಪುರವರ ಬಾಲ್ಯದ ಫೋಟೋಗಳು, ಅವರ ಫ್ಯಾಮಿಲಿ ಫೋಟೋ, ಬೇಂದ್ರೆ ಜೊತೆಗಿದ್ದ ಫೋಟೋ, ಎಲ್ಲವನ್ನೂ ಪ್ರದರ್ಶಿಸಲಾಗಿತ್ತು.  ಈ ಕವಿಮನೆಯ ವಸ್ತುಸಂಗ್ರಹಾಲಯದಲ್ಲಿದ್ದ ಎಲ್ಲ ವಸ್ತುಗಳಬಗ್ಗೆ, ಅದರ ಇತಿಹಾಸ ಮತ್ತು ಶ್ರೇಷ್ಠತೆಯ ಬಗ್ಗೆ ನಮ್ಮ ಗಮನ ಸೆಳೆದವರು ಅಲ್ಲಿ ಕೆಲಸ ಮಾಡುತ್ತಿರುವ ಪಲ್ಲವಿ ಎಂಬುವರು.  ನಮಗೆ ತಿಳಿಯದೆ ಇರುವ ಎಷ್ಟೋ ವಿಚಾರಗಳನ್ನು ಅವರು ನಮಗೆ ತಿಳಿಸಿಕೊಟ್ಟರು.  ಸಾಹಿತ್ಯದಲ್ಲಿ ಆಸಕ್ತಿ ಇರುವವರು, ಒಂದು ಬಾರಿ ಕವಿಮನೆಯನ್ನು ಸುತ್ತು ಹಾಕಿದರೆ, ಅವರ ಸಾಹಿತ್ಯದ ಅಭಿರುಚಿಯು ಇನ್ನಷ್ಟು ಹೆಚ್ಚಾಗುವುದರಲ್ಲಿ ಅನುಮಾನವೇ ಇಲ್ಲ.  ಅಂತಹ ಸ್ಪೂರ್ತಿ ನೀಡುವ ಮನೆ ಈ “ಕವಿಮನೆ”.

ಮನೆಯಿಂದ ಹೊರಗೆ ಬಂದ ಕೂಡಲೇ ಪಕ್ಕದಲ್ಲಿ ಕವಿಶೈಲಗೆ ಕಾಲುದಾರಿ ಇದೆ.  ಕವಿಶೈಲ ಕುವೆಂಪು ಮನೆಗೆ ಹೊಂದಿಕೊಂಡಂತೆ ಇರುವ ಒಂದು ಭವ್ಯವಾದ, ಪರಿಸರದ ತಾಣ.  ಮಳೆಯನ್ನು ತನ್ನ ಉಸಿರಾಗಿಸಿಕೊಂಡ ಮಲೆನಾಡಿನ ಈ ತಾಣ ನಿತ್ಯವೂ ಹಚ್ಚ ಹಸಿರಿನಿಂದ ಕೂಡಿ ಕಂಗೊಳಿಸುತ್ತಿದೆ.

IMG_0045

ಕಾಲುದಾರಿಯಲ್ಲಿ ಕಲ್ಲು ಹಾಸಿನ ಮೇಲೆ ಹತ್ತು ನಿಮಿಷ ನೆಡೆದರೆ ಕವಿಶೈಲದ  ತುದಿ ಮುಟ್ಟಬಹುದು.  ಹತ್ತುಬಂದ ನಮಗೆ ಎದುರುಗೊಂಡಿದ್ದು, ಒಂದು ಸುಂದರವಾದ ಕಲ್ಲುಗಳ ಸ್ಮಾರಕ.  ಇದು ಕುವೆಂಪುರವರು ಅಗಲಿದ ನಂತರ ಕಲಾವಿದನ ಕಲ್ಪನೆಯಲ್ಲಿ ಮೂಡಿದ ಬೃಹತ್ ಶಿಲಾ ಶಿಲ್ಪಗಳು.  ಎಂತವರನ್ನು ಮಂತ್ರಮಗ್ನರಾಗಿಸುವ ಈ ಶಿಲಾ ಶಿಲ್ಪಗಳು ಕವಿಶೈಲದ  ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.

IMG_0069_70_71_tonemapped
ಕವಿಶೈಲದ ಶಿಲಾ ಶಿಲ್ಪಗಳು
IMG_0097_8_9_tonemapped
ಕವಿಶೈಲದ ಶಿಲಾ ಶಿಲ್ಪಗಳು

ಕುವೆಂಪುರವರ ಮಹಾ ಕಾದಂಬರಿಗಳಾದ ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿಯಲ್ಲಿ ಬರುವ ಕಾಡು, ಮೇಡು, ಬೆಟ್ಟ ಗುಡ್ಡ, ದಟ್ಟ ಅರಣ್ಯ, ಇವಲ್ಲವನ್ನು ಅತ್ಯಂತ ಮನೋಜ್ಞವಾಗೆ ಚಿತ್ರಿಸಿರುವುದಕ್ಕೆ ಸ್ಪೂರ್ತಿಯಾದ ತಾಣವೆ ಕವಿಶೈಲ.  ಹದಿನೈದು ವರ್ಷ ಬಾಲ್ಯವನ್ನು ಇಲ್ಲೇ ಕಳೆದಿದ್ದ ಕುವೆಂಪು, ಅವರ ಜೀವನದಲ್ಲಿ ಮತ್ತೆ ಮತ್ತೆ ಭೇಟಿ ಕೊಟ್ಟ ತಾಣ ಕವಿಶೈಲ ಆಗಿತ್ತು.  ಅಷ್ಟು ಆಳವಾಗಿ ಕುವೆಂಪು ಈ ತಾಣವನ್ನು ಪ್ರೀತಿಸಿದ್ದರು.  ಕವಿಶೈಲದ ತುದಿಯನ್ನು ಮುಟ್ಟುತ್ತಿದ್ದಂತೆ, ಮಿತ್ರರಿರೇ ಮಾತಿಲ್ಲಿ ಮೈಲಿಗೆ! ಸುಮ್ಮನಿರಿ ಮೌನವೆ ಮಹತ್ತಿಲ್ಲಿ, ಈ ಬೈಗುಹೊತ್ತಿನಲಿ… ಎಂದು ಬರೆದ ಕಲ್ಲು ನಮಗೆ ಎದುರುಗೊಂಡಿತ್ತು.

IMG_0079

ಈ ಜಾಗವನ್ನು ಕಂಡ ಯಾರಿಗಾದರೂ ಇಲ್ಲಿ ಮಾತಿಗಿಂತ ಮೌನವೆ ಶ್ರೇಷ್ಠ ಎಂದೆನಿಸುವುದರಲ್ಲಿ ಸಂದೇಹವೆ ಇಲ್ಲ.  ಅಲ್ಲಿರುವ ನಿಶಬ್ಧತೆ ಎಷ್ಟಿತ್ತೆಂದರೆ, ಮರದ ಒಂದೆ ಒಂದು ಎಲೆ ಅಲ್ಲಾಡಿದರು ಸಹ ಅದರ ಶಬ್ದ ಕೇಳಿಸುವಷ್ಟಿತ್ತು.  ನಿತ್ಯಹರಿದ್ವರ್ಣದ ಕಾಡು, ಸಹ್ಯಾದ್ರಿ ಬೆಟ್ಟಗಳ ನೋಟ ಮಲೆನಾಡಿನ ನಿಜವಾದ ಚಿತ್ರಣವನ್ನು ಪ್ರತಿಬಿಂಭಿಸುತ್ತಿತ್ತು.  ಕುವೆಂಪು ಅವರೊಬ್ಬರೆ ಅಲ್ಲದೆ ಅವರ ಆಪ್ತ ಸ್ನೇಹಿತರು ಕೂಡ ಬಂದು ಬೆಟಿಯಾಗುತ್ತಿದ್ದ ಜಾಗ ಈ ಕವಿಶೈಲ.  ಹಾಗೆ ಬಂದಾಗ ಬಿ ಎಂ ಶ್ರೀಕಂಠಯ್ಯ, ಟಿ ಎಸ್ ವೆಂಕಟರಾಯರು ಮತ್ತು ಕುವೆಂಪು ಕವಿಶೈಲದ ಬಂಡೆಯ ಮೇಲೆ ತಮ್ಮ ಹಸ್ತಾಕ್ಷರಗಳನ್ನು ಉಳಿಸಿ ಹೋಗಿದ್ದಾರೆ.  ಇದನ್ನು ನೋಡುವುದೇ ಒಂದು ರೋಮಾಂಚನ.

IMG_0111

ಇಷ್ಟು ಅದ್ಬುತವಾದ ಕವಿಶೈಲದ ವರ್ಣನೆಯನ್ನು ಕವಿ ವಾಣಿಯಲ್ಲೇ ಕೇಳಬೇಕಾದರೆ, ಇಲ್ಲಿದೆ ನೋಡಿ…

IMG_0103

“ನೀಂ ಭುವನದಲಿ ಸ್ವರ್ಗವಾಗಿಹೆ…” ಎಂಬ ಸಾಲುಗಳು ಇಲ್ಲಿಗೆ ಬರುವ ಪ್ರತಿಯೊಬ್ಬ ಪರಿಸರ ಪ್ರೇಮಿಗು ಅನ್ವಹಿಸುವುದರಲ್ಲಿ ಎರಡು ಮಾತಿಲ್ಲ.  ಕವೆಂಪುರವರನ್ನು ಜೀವನದುದ್ದಕ್ಕೂ ಪ್ರೇರೇಪಿಸಿದ ಕವಿಶೈಲದಲ್ಲಿಯೇ ಅವರ ಬಾಹ್ಯ ಶರೀರವನ್ನು ಲೀನ ಮಾಡಲಾಗಿದೆ.  ಅವರ ಅಂತ್ಯ ಸಂಸ್ಕಾರ ನೆಡೆದದ್ದು ಈ ಹಾಸುಹೊದ್ದ ಕವಿಶೈಲದ ಬಂಡೆಯಲ್ಲಿ.  ತನಗೆ ಅತ್ಯಂತ ಪ್ರಿಯವಾದ ಕವಿಶೈಲದಲ್ಲಿಯೇ ಚಿರನಿದ್ರೆ ಮಾಡುತ್ತಿರುವ ಕುವೆಂಪು, ಇಂದಿಗೂ ತನ್ನ ವಿಶ್ವ ಮಾನವನ ಸಂದೇಶ, ಸಾಹಿತ್ಯದ ಅಭಿರುಚಿ, ಪ್ರಕೃತಿಯ ವೈಭವವನ್ನು ಇಲ್ಲಿಗೆ ಬೇಟಿ ಕೊಟ್ಟವರಿಗೆ ಉಣಬಡಿಸುತ್ತಲೇ ಇದ್ದಾರೆ.

IMG_0085

IMG_0100_1_2_tonemapped
ಕವಿಸಮಾಧಿ ಮತ್ತು ಶಿಲಾ ಶಿಲ್ಪಗಳು
IMG_0112
ಕವಿಶೈಲದಿಂದ ಸಹ್ಯಾದ್ರಿ ಬೆಟ್ಟಗಳ ವಿಹಂಗಮ ನೋಟ

ನಾನು ನನ್ನ ಸ್ನೇಹಿತ ಕಿರಣ್ ಕವಿಶೈಲ ಬೆಟ್ಟದ ಮೇಲೆ ಹೋದಾಗ, ಅಲ್ಲಿ ಯಾರು ಇರಲಿಲ್ಲ. ಜೋರಾದ ಮಳೆ, ನಿಶಬ್ಧತೆ ಮಳೆಯ ಶಬ್ದ, ಕವಿಸಮಾಧಿ, ಬೃಹತ್ ಶಿಲಾ ಶಿಲ್ಪಗಳು, ಸಹ್ಯಾದ್ರಿ ಬೆಟ್ಟದ ಸಾಲು ಎಲ್ಲವೂ ಕವಿಶೈಲದ ಭವ್ಯ ಸೌಂದರ್ಯವನ್ನು ಅಷ್ಟೇ ನಿಶಬ್ದತೆಯಿಂದ ಪ್ರದರ್ಶಿಸುತ್ತಿದ್ದವು.  ಮೌನದಿಂದಲೇ ಅಲ್ಲಿ ಕಳೆದ ಸಮಯವನ್ನು ಪದಗಳಿಂದ ವರ್ಣಿಸಲು ನನಗೆ ಆಸಾದ್ಯ.  ಹೆಚ್ಚು ಹೊತ್ತು ಸಮಯ ಕಳೆದ ನಮಗೆ, ಸಮಯ ಹೊರಳಿದ್ದೆ ಗೊತ್ತಾಗಲಿಲ್ಲ.  ಮನಸಿಲ್ಲದ ಮನಸ್ಸಿನಲ್ಲಿ ಕೆಳಗೆ ಇಳಿದು ಬರಬೇಕಾಯಿತು.

ಕುವೆಂಪುರವರ ಜನ್ಮ ಶತಮಾನೋತ್ಸವದ ನೆನಪಿಗಾಗಿ ಮತ್ತೊಂದು ಸ್ಮಾರಕ, ಮಲೆನಾಡಿನ ಮನೆಯ ಶೈಲಿಯಲ್ಲಿ ನಿರ್ಮಾಣವಾಗಿರುವುದು ಇಲ್ಲಿಯ ಮತ್ತೊಂದು ವಿಶೇಷ.  ಬಯಲುರಂಗ ಮಂದಿರವನ್ನು ಒಳಗೊಂಡ ಈ ಸ್ಮಾರಕ, ಸಾಹಿತ್ಯ ಸಾಂಸ್ಕೃತಿಕ ಪ್ರದರ್ಶನಗಳನ್ನು ನೆಡೆಸಲು ಹೇಳಿಮಾಡಿಸಿದ ಜಾಗವಾಗಿದೆ.  ಪ್ರವಾಸಿಗರು ತಂಗುವುದಕ್ಕೆ ಕೆಲವು ಕೊಠಡಿಗಳನ್ನು ನಿರ್ಮಾಣ ಮಾಡಿ, ಸಕಲ ಸೌಲಭ್ಯಗಳನ್ನು ಈ ಸ್ಮಾರಕದಲ್ಲಿ ಒದಗಿಸಲಾಗಿದೆ.

IMG_0003
ಶತಮಾನೋತ್ಸವದ ಕಟ್ಟಡ
IMG_0137
ಕಲಾನಿಕೇತನ
IMG_0140
ಕಾನೂರು ಹೆಗ್ಗಡತಿಯಲ್ಲಿ ಬರುವ ಹೆಗ್ಗಡತಿಯ ಪುತ್ಹಳಿ

ಇದರ ಪಕ್ಕದಲ್ಲೇ “ಕಲಾನಿಕೇತನ” ಎಂಬ ಮತ್ತೊಂದು ಕಟ್ಟಡವನ್ನು ನಿರ್ಮಾಣಮಾಡಲಾಗಿದೆ.  ಕುವೆಂಪು ಬರೆದ “ಮಲೆಗಳಲ್ಲಿ ಮದುಮಗಳು” ಕಾದಂಬರಿ ಓದಿದ್ದ ನನಗೆ, ಅದರಲ್ಲಿ ಬರುವ ಗುತ್ತಿ ಮತ್ತು ಹುಲಿಯ (ನಾಯಿ) ಅತ್ಯಂತ ಇಷ್ಟವಾದ ಪಾತ್ರ.  ಕುಪ್ಪಳಿಗೆ ಬರುವ ಮೊದಲೇ “ಕಲಾನಿಕೇತನ” ದ ಮುಂದೆ ಸೃಷ್ಟಿಸಿರುವ ಗುತ್ತಿ ಮತ್ತು ಹುಲಿಯನ ಪುತ್ಹಳಿಯ ಬಗ್ಗೆ ತಿಳಿದಿದ್ದೆ.  ಅದರ ಜೊತೆ ನನ್ನದೊಂದು ಫೋಟೋ ಬೇಕೆ ಬೇಕು ಅಂತ ನನ್ನ ಸ್ನೇಹಿತ ಕಿರಣ್ ಗೆ ಹಟ ಹಿಡಿದಿದ್ದೆ.  ಆ ಪುತ್ಹಳಿಯ ಮುಂದೆ ಬಂದು ನಿಂತಾಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ.  ಜೋರಾಗಿ ಮಳೆ ಬೀಳುತ್ತಿದ್ದರು ಅದನ್ನು ಲೆಕ್ಕಿಸದೆ ಫೋಟೋ ತೆಗೆಸಿಕೊಂಡೆ.  ಹಾಗೆಯೆ ಕಿರಣ್ ದು ಒಂದು ಫೋಟೋ ತೆಗೆದೆ.  ಅದೇ ಈ ಕೆಳಗಿರೋ ಎರಡು ಫೋಟೋ, “ಗುತ್ತಿನಾಯಿ ಮತ್ತು ನಾಯಿಗುತ್ತಿ” ಯ ಜೊತೆ! ಇದರ ಜೊತೆಗೆ ಕಾನೂರು ಹೆಗ್ಗಡತಿಯಲ್ಲಿ ಬರುವ ಹೆಗ್ಗಡತಿಯ ಪುತ್ಹಳಿಯು ಇದೆ.

IMG_0160
ಗುತ್ತಿ, ಹುಲಿಯ ಮತ್ತು ನಾನು
IMG_0153
ಗುತ್ತಿ, ಹುಲಿಯ ಮತ್ತು ಕಿರಣ್

“ಕಲಾನಿಕೇತನ”ದ ಒಳಗೆ ತೇಜಸ್ವಿರವರ ಮಲೆನಾಡಿನ ಪಕ್ಷಿಗಳ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿದೆ.  ನವಿಲುಕಲ್ಲಿನ ಸೂರ್ಯ ಉದಯಿಸುವ ಚಿತ್ರ, ಕುವೆಂಪುರವರಿಗೆ “ದೇವರು ರುಜು ಮಾಡಿದನು” ಪದ್ಯಕ್ಕೆ ಸ್ಪೂರ್ತಿ ನೀಡಿದ ತುಂಗಾ ನದಿಯ ತೀರ, ಮಹಾಕಾವ್ಯಗಳಲ್ಲಿ ಶೃಷ್ಟಿಸಿರುವ ಕೆಲವು ಪಾತ್ರಗಳ ಚಿತ್ರಕಲೆಗಳು ಮನತಣಿಸುವಂತಿತ್ತು.

ಇದೆಲ್ಲವನ್ನು ನೋಡಿ ಆಸ್ವಾದಿಸಿ ಹೊರಗೆ ಬಂದ ನಮಗೆ ಮತ್ತೊಂದು ಪವಿತ್ರ ಸ್ಥಳ ಎದುರಾಗಿತ್ತು.  ಅದೇ ಕೆ ಪಿ ಪೂರ್ಣಚಂದ್ರ ತೇಜಸ್ವಿ ರವರ ಸ್ಮಾರಕ.  ತೇಜಸ್ವಿಯವರ ಬಾಹ್ಯ ಶರೀರವನ್ನು ಅವರ ತಂದೆಯೇ ಹೇಳುವಂತೆ ಸ್ವರ್ಗದಂತಿದ್ದ ಕವಿಶೈಲದಲ್ಲಿಯೇ ಲೀನಮಾಡಲಾಗಿತ್ತು.  ಬೃಹತ್ ಶಿಲಾ ಶಿಲ್ಪಾದ ಸ್ಮಾರಕ, ಪ್ರಕೃತಿಯ ಮಗದೊಂದು ಬಾಗವಾಗಿ, ಪವಿತ್ರ ಸ್ಥಳವಾಗಿ ಕಂಗೊಳಿಸುತಿತ್ತು.

IMG_9998
ತೇಜಸ್ವಿಯ ಸ್ಮಾರಕ

ನಾವು ಕುಪ್ಪಳಿಗೆ ತೆರೆಳಿದ್ದು ಸ್ವಂತ ವಾಹನದಲ್ಲಿ ಅಲ್ಲ.  ಬದಲಾಗಿ ಸ್ಥಳೀಯ ಬಸ್ಸುಗಳಿಂದ.  ಆ ಬಸ್ಸುಗಳೆಲ್ಲ ಕುಪ್ಪಳಿಯ ಒಳಗೆ ಬರದೇ, ತಿರುವಿನಲ್ಲೇ ನಿಲ್ಲಿಸಿ ಹೋಗುತ್ತಿದ್ದವು.  ಅಲ್ಲಿಂದ ಕುಪ್ಪಳಿಗೆ ಎರಡು ಕಿಲೋಮೀಟರ್ ನೆಡೆಯಬೇಕಾಗಿತ್ತು.  ಹಾಗೆ ನೆಡೆದು ಬರುವಾಗಲೇ ಕುಪ್ಪಳಿಯು ತನ್ನ ಭವ್ಯ ಸೌಂದರ್ಯವನ್ನು ನಮಗೆ ಉಣಬಡಿಸಿತ್ತು.

IMG_0013
ಕುಪ್ಪಳ್ಳಿಗೆ ದಾರಿ
IMG_9994
ಕವಿಶೈಲಕ್ಕೆ ದಾರಿ (ರಸ್ತೆ ಯಲ್ಲೂ ಹೋಗಬಹುದು)

IMG_0015

IMG_9980ಪಕ್ಕದಲ್ಲಿ ಕಾಣುವ ಚಿಕ್ಕ ಚಿಕ್ಕ ಕಾಲುವೆ, ನೀರಿನ ಜರಿಗಳು, ಜೋರಾದ ಮಳೆ, ಇದರ ಸೌಂಧರ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು.  ಸ್ವಂತ ವಾಹನದಲ್ಲಿ ಬಂದಿದ್ದರೆ ಈ ಅನುಭವ ಸಿಗುತ್ತಿರಲಿಲ್ಲ ಎಂಬುದು ನನ್ನ ಅನಿಸಿಕೆ.  ವಿಶ್ವಮಾನವ ಸಂದೇಶ ಸಾರಿದ್ದ ಈ ದೇಶದ ಮಹಾನ್ ಕವಿಯ ಅಂಗಳಕ್ಕೆ ಬೇಟಿ ನೀಡಿದ್ದ ನನಗೆ, ಪ್ರಕೃತಿಯ ಸೌಂಧರ್ಯ, ಇದರಿಂದ ಸ್ಪೂರ್ತಿಗೊಂಡು ರಚಿಸಿದ್ದ ಸಾಹಿತ್ಯಗಳನ್ನು ಕಂಡು, ಯಾವತ್ತೂ ಅನುಭವಿಸದ ಲೋಕಕ್ಕೆ ಹೋಗಿದ್ದಂತು ನಿಜ.  ದಾರಿಯಲ್ಲಿ ಬರುವಾಗಲೇ ಕುಪ್ಪಳಿಯ ಸೌಂಧರ್ಯವನ್ನು ಕಂಡು ಮಾತುಗಳೇ ಹೊರಡದೆ, ನಮಗೆ ಗೊತ್ತಿಲ್ಲದೆ ಮೌನಕ್ಕೆ ಶರಣಾಗಿದ್ದೆವು.  ಮಾತಿಲ್ಲಿ ಮೈಲಿಗೆ! ಸುಮ್ಮನಿರಿ ಮೌನವೆ ಮಹತ್ತಿಲ್ಲಿ, ಈ ಬೈಗುಹೊತ್ತಿನಲಿ ಎಂಬ ಕುವೆಂಪುರವರ ಮಾತು ಅಕ್ಷರ ಸಹ ಇಲ್ಲಿ ಸತ್ಯ.  ನನ್ನ ಬಹುದಿನಗಳ ಕನಸು ನನಸಾಗಿತ್ತು, ಮತ್ತೊಮ್ಮೆ ಬಂದು ಒಂದೆರಡು ದಿನ  ತಂಗಬೇಕೆಂದು, ನನಗೆ ಗೊತ್ತಿಲ್ಲದೆ ನನ್ನ ಮನಸ್ಸಿನಲ್ಲಿ ಇನ್ನೊಂದು ಕನಸು ಚಿಗುರಿತ್ತು.

ಬೆಂಗಳೂರಿನಿಂದ ಪ್ರತಿದಿನವು KSRTC ಸುವಿಹಾರಿ (Sleeper Coach) ಬಸ್ಸು ರಾತ್ರಿ 10:30 ಕ್ಕೆ ಕುಪ್ಪಳಿಗೆ ಸಂಚರಿಸಲಿದೆ. ಕುಪ್ಪಳಿಯಿಂದ ಪ್ರತಿದಿನ ಮತ್ತೊಂದು ಬಸ್ಸು ರಾತ್ರಿ 08:30 ಕ್ಕೆ ಬೆಂಗಳೂರಿಗೆ ಸಂಚರಿಸಲಿದೆ.  ಯವಾಗಲಾದರೂ ಸಮಯ ಮಾಡಿಕೊಂಡು ಈ ದಾರ್ಶನಿಕ ಕವಿಯ ಅಂಗಳಕ್ಕೆ ಒಮ್ಮೆ ಹೋಗಿಬನ್ನಿ.

IMG_9964

 —–
-ವಿಶ್ವ ಕೀರ್ತಿ ಎಸ್
27/08/2013.

Advertisements

ನಾ ಕಂಡ “ಮಲೆಗಳಲ್ಲಿ ಮದುಮಗಳು”

ಇಲ್ಲಿ ಯಾರು ಮುಖ್ಯರಲ್ಲ; ಯಾರು ಅಮುಖ್ಯರಲ್ಲ, ಯಾವುದು ಯಕ:ಶ್ಚಿತವಲ್ಲ, ಇಲ್ಲಿ ಯಾವುದಕ್ಕೂ ಮೊದಲಿಲ್ಲ, ಯಾವುದಕ್ಕು ತುದಿಇಲ್ಲ, ಇಲ್ಲಿ ಅವಸರವು  ಸಾವದಾನದ ಬೆನ್ನೇರಿದೆ, ಇಲ್ಲಿ ಎಲ್ಲಕ್ಕೂ ಇದೆ ಅರ್ಥ, ಯಾವುದು ಅಲ್ಲ ವ್ಯರ್ಥ. ನೀರೆಲ್ಲವು ತೀರ್ಥ, ತೀರ್ಥವು ನೀರೇ.

     ಇದು ಕುವೆಂಪುರವರು ಈ ಕಾದಂಬರಿಯ ಮೊದಲ ಪುಟದಲ್ಲಿ ಬರೆದ ಸಾಲುಗಳು.  ಅದರ ಅರ್ಥ ಎಷ್ಟು ದೊಡ್ಡದು ಎನ್ನುವುದನ್ನು ಮತ್ತೊಮ್ಮೆ ಮಗದೊಮ್ಮೆ ನೀವೇ ಓದಿ ನೋಡಿ, ತಿಳಿಯುತ್ತದೆ.  ನನ್ನ ಪ್ರಕಾರ ಇವು  ಅದ್ಬುತ ಸಾಲುಗಳು.

     ಎಪ್ಪತ್ತರ ದಶಕದಲ್ಲಿ “ಶ್ರೀ ರಾಮಾಯಣ ದರ್ಶನಂ” ರಚಿಸಿದ ಕುವೆಂಪುರವರು, ತದನಂತರ ರಚಿಸಿದ್ದು ಕನ್ನಡದ ಮಹಾಕಾವ್ಯಗಳಲ್ಲಿ ಒಂದಾದ “ಮಲೆಗಳಲ್ಲಿ ಮದುಮಗಳು”. ಮಲೆನಾಡಿನ ಜನರ ಜೀವನ ಶೈಲಿ, ಅವರ ಮೂಡನಂಬಿಕೆ, ಜಾತಿ, ಮತ, ಧರ್ಮ, ಹೆಣ್ಣಿನ ಶೋಷಣೆ ಎಲ್ಲವನ್ನೂ ನೈಜ ರೂಪದಲ್ಲಿ ಈ ಕಾದಂಬರಿಯಲ್ಲಿ ಚಿತ್ರಿಸಿದರು.  ಇಂದಿಗೂ ಇದು ತುಂಬಾ ಜನಪ್ರಿಯವಾದ ಕಾದಂಬರಿ.  ಇತ್ತೀಚೆಗೆ ಬೆಂಗಳೂರಿನ ಕಲಾಗ್ರಾಮದಲ್ಲಿ ನೆಡೆದ ಈ ನಾಟಕವು ನಿಜವಾಗಲೂ ಮೇಲಿನ ಮಾತನ್ನು ಪುಶ್ಟಿಕರಿಸಿತ್ತು.

     ಈ ನಾಟಕವು ಕರ್ನಾಟಕದ ಸಾಂಸ್ಕೃತಿಕ ಲೋಕದಲ್ಲೇ ಒಂದು ವಿಶಿಷ್ಟವಾದ ಪ್ರಯೋಗ ಎಂದರೆ ತಪ್ಪಾಗಲಾರದು.  ಸುಮಾರು 700 ಪುಟಗಳಿರುವ ಕಾದಂಬರಿಯನ್ನು ಡಾ. ಕೆ. ವೈ. ನಾರಾಯಣಸ್ವಾಮಿಯವರು ರಂಗರೂಪಕ್ಕೆ ತಂದಿದ್ದರು (ಇವರು ನನಗೆ ಪದವಿಯ ತರಗತಿಯಲ್ಲಿ ಕನ್ನಡ ಮೇಷ್ಟ್ರು ಆಗಿದ್ದರು).  ನಿರ್ದೇಶಿಸಿದ್ದು ಸಿ. ಬಸವಲಿಂಗಯ್ಯ ನವರು. ಇದಕ್ಕೆ ಹಂಸಲೇಖರವರು ಸಂಗೀತ ಕೊಟ್ಟಿದ್ದರು.  ಇದಲ್ಲದೆ ಅದ್ಬುತವಾದ ರಂಗಸಜ್ಜಿಕೆಯು ಈ ನಾಟಕದ ಮತ್ತೊಂದು ವಿಶೇಷ.  ಒಂದಲ್ಲ, ಎರಡಲ್ಲ, ಬರೋಬ್ಬರಿ ನಾಲ್ಕು ಬಯಲು ರಂಗ ಮಂದಿರವನ್ನು ನಾಟಕಕ್ಕೆ ಬೇಕಾಗುವಂತೆ ನಿರ್ಮಿಸಲಾಗಿತ್ತು.  ಇದರಲ್ಲಿ “ಕೆರೆ ಅಂಗಳ” ಬಯಲು ರಂಗವನ್ನು ಕಣ್ಣಿಗೆ ರಸದೌತಣವಾಗುವಂತೆ ನಿರ್ಮಿಸಿದ್ದರು.  ತಾತ್ಕಾಲಿಕವಾದ ಕೆರೆ, ಸೇತುವೆ, ಮನೆ, ಮರ, ಎಲ್ಲವನ್ನೂ ಕಟ್ಟಲಾಗಿತ್ತು.  ಇದೆಲ್ಲವನ್ನು “ಕರ್ನಾಟಕ ಕಲಾಗ್ರಾಮ” ಜ್ಞಾನಭರತಿ ಹಿಂಬಾಗದ ಆವರಣದಲ್ಲಿ ನಿರ್ಮಿಸಲಾಗಿತ್ತು.  ಇತರಹದ ನೈಜ ರಂಗ ಮಂದಿರದಲ್ಲಿ ನಾನು ನಾಟಕ ನೋಡಿದ್ದು ಮೊದಲನೆಬಾರಿ.

     ನಾಟಕವು ರಾತ್ರಿ ಪೂರಾ ಅಂದರೆ, ಸುಮಾರು 9 ಗಂಟೆಗಳ ವಿಶಿಷ್ಟ ಪ್ರಯೋಗವಾಗಿತ್ತು.  ಒಂದು ತಿಂಗಳು ಪೂರ್ತಿ (ದಿನ ಬಿಟ್ಟು ದಿನ) ನೆಡೆದ ನಾಟಕಕ್ಕೆ, ನನ್ನ ಕೆಲಸದ ಬಿಡುವಿನಲ್ಲಿ ಎರಡು ಬಾರಿ ಹೋಗಲು ಅವಕಾಶ ಸಿಕ್ಕಿತು.  ಮತ್ತೊಂದು ಬಾರಿ ಹೋಗೋಕ್ಕೆ ಟಿಕ್ಕೆಟು ಸಿಗಲಿಲ್ಲ.  ಒಂದೇ ಮಾತಲ್ಲಿ ಹೇಳೋದಾದ್ರೆ ನಾನು ಕಂಡ ಒಂದು ಅದ್ಬುತ ನಾಟಕ. ಒಟ್ಟು 74 ಕಲಾವಿದರು ನಟಿಸಿದ್ದ ನಾಟಕದಲ್ಲಿ, ಎಲ್ಲರ ಪ್ರದರ್ಶನವು ಅದ್ಬುತವಾಗಿ ಮೂಡಿಬಂದಿತ್ತು.  ನಾಟಕದಲ್ಲಿ ಬರುವ ಗುತ್ತಿ, ಹುಲಿಯ, ಐತ, ಪಿಚುಲು, ತಿಮ್ಮಿ, ವೆಂಕಣ್ಣಗೌಡ ಪಾತ್ರವನ್ನು ಮರೆಯಲು ಸಾದ್ಯವಿಲ್ಲ.  ಒಟ್ಟು 41 ಹಾಡುಗಳುನ್ನು ನಾರಾಯಣಸ್ವಾಮಿ ಅವರು ಈ ನಾಟಕಕ್ಕೆಂದೆ ರಚಿಸಿದ್ದರು. ಈಗಲೂ ಆ ಹಾಡುಗಳನ್ನೇ ಇನ್ನೂ ಕೇಳುತ್ತಿರುವೆ.  ಹಾಗೆಯೇ ಈ ನಾಟಕವು ಸಮಾಜದಲ್ಲಿ ಇರುವ ಜಾತಿ, ಮತ, ಧರ್ಮ, ‘ಗಳಿಂದ ಊಂಟಾಗುವ ಮೂಡನಂಬಿಕೆ ಇದರಿಂದಗುವ ಪರಿಣಾಮವನ್ನು ನಮ್ಮ ಕಣ್ಣೆದುರೆ ತಂದು ನಿಲ್ಲಿಸುತ್ತದೆ.  ಇಂದಿಗೂ ಚಾಲ್ತಿಯಲ್ಲಿರುವ (ಹೆಚ್ಚಾಗಿ ಹಳ್ಳಿಯ ಕಡೆ) ಇಂತಹ ಮೂಡನಂಬಿಕೆ, ಶೋಷಣೆಯ ವಿರುದ್ದ ಯೋಚನೆ ಮಾಡಬೇಕೆಂಬ ಅಂಶವನ್ನು ನಮ್ಮಲ್ಲಿ ಬಿತ್ತುತದೆ.

     ಒಟ್ಟಾರೆ ಹೇಳೋದಾದರೆ, ಈ ನಾಟಕವು ಮಲೆನಾಡಿನ ನೈಸರ್ಗಿಕ ಭಾಷೆಯ ಪ್ರೀತಿ, ವಾತ್ಸಲ್ಯ, ಹಾಸ್ಯ, ಬೈಗುಳ, ಮಲೆನಾಡಿನ ಸೌಂದರ್ಯ ಎಲ್ಲವನ್ನೂ ತನ್ನೊಳಗೆ ಚಿತ್ರಿಸಿಕೊಂಡಿತ್ತು.  ಒಂಬತ್ತು ಗಂಟೆ, ನಾಲಕ್ಕು ಬಯಲು ರಂಗದಲ್ಲಿ ನೋಡಿದ ನಾಟಕವು, ನನಗೆ ಒಂದು ಮರೆಯಲಾರದ ಅನುಭವ ನೀಡಿತು.  ನನ್ನ ಮಟ್ಟಿಗೆ, ಇದು ನಾನು ಕಂಡ ಒಂದು ಅದ್ಬುತ ನಾಟಕ.  ಈ ನಾಟಕವನ್ನು ಕನ್ನಡದ ಜನತೆಯ ಮುಂದಿಟ್ಟ ನಿರ್ದೇಶಕರಿಗೆ, ನನ್ನ ಮೇಷ್ಟ್ರಿಗೆ, ಕಲಾವಿದರಿಗೆ, ತಾಂತ್ರಿಕವರ್ಗದವರಿಗೆ, ಎಲ್ಲರಿಗೂ ಇಲ್ಲಿಂದಲೆ ನನ್ನದೊಂದು ಸಲಾಮ್.

     ನಾಟಕಕ್ಕೆ ಎರಡನೇ ಬಾರಿ ಹೋದಾಗ, ನನ್ನ ಜೊತೆಗೆ ನನ್ನ ಕ್ಯಾಮರಾವನ್ನು ಕರೆದುಕೊಂಡು ಹೋಗಿದ್ದೆ. ಆ ಕ್ಯಾಮರಾ ಕಂಡ “ಮಲೆಗಳಲ್ಲಿ ಮದುಮಗಳು” ಇಲ್ಲಿದೆ.

ಈ ನಾಟಕವು ಏಪ್ರಿಲ್ 18, 2013 ರಿಂದ  ಜೂನ್ 3, 2013 ವರೆಗೂ ನೆಡೆದಿತ್ತು.

– ವಿಶ್ವ ಕೀರ್ತಿ. ಏಸ್, ಜೂನ್ 26, 2013.