ಕಾರಂತರ ಮೂಕಜ್ಜಿ!

ಕುಂದಾಪುರದ ಮೂಡೂರು, ಹಿಂಡುಗಾನ, ಕೊಲ್ಲೂರಿನಲ್ಲಿ ನೆಡೆಯುವ ಕಥೆಯೇ “ಮೂಕಜ್ಜಿಯ ಕನಸುಗಳು”.  ಕಾರಂತರ ಕಾದಂಬರಿಗಳಲ್ಲೇ ಇದೊಂದು ವಿಶಿಷ್ಟವಾದ ಕಾದಂಬರಿ.  ಅಜ್ಜಿ ಮತ್ತು ಅವರ ಮೊಮ್ಮಗ ಸುಬ್ಬರಾಯನ ನಡುವೆ ನೆಡೆಯುವ ಮಾತುಕತೆಯೇ ಈ ಕಾದಂಬರಿಯ ಕಥಾವಸ್ತುವಾಗಿದೆ.  ಕಾರಂತರೆ ಹೇಳುವಂತೆ ಈ ಕಥೆಯಲ್ಲಿ ನಾಯಕನು ಇಲ್ಲ, ನಾಯಕಿಯು ಇಲ್ಲ, ಕಥೆಯಲ್ಲಿ ಬರುವ ಮೂಕಜ್ಜಿಯು ಸಹ ನಾಯಕಿಯಲ್ಲ.  ಇವರಿಬ್ಬರ ಮಾತುಕಥೆಯನ್ನು ಪುಷ್ಟೀಕರಿಸುವ ಸಂಧರ್ಬಗಳು, ಸನ್ನಿವೇಶಗಳು ಹಾಗೆಯೇ ನೆಡೆದು ಬರುತ್ತವೆ.

ಕಾರಂತರು ಸೃಷ್ಟಿಸಿರುವ ಮೂಕಜ್ಜಿ, ಸುಬ್ಬರಾಯನ ಪಾತ್ರಗಳು ಮೆಚ್ಚುವಂತದ್ದು.  ನಮ್ಮ ಯೋಚನೆಗಳನ್ನು ಪ್ರತಿಬಿಂಬಿಸುವ ನೈಜ ಪಾತ್ರಗಳಾಗಿ ಕಾರಂತರು ಇವರಿಬ್ಬರನ್ನು  ಸೃಷ್ಟಿಸಿದ್ದಾರೆ.  ಕಥೆಯ ಉದ್ದಕ್ಕೂ ಮೊಮ್ಮಗನಾದ ಸುಬ್ಬರಾಯ ತನ್ನ ಅಜ್ಜಿಗೆ ದೇವರ ಅಸ್ತಿತ್ವದ ಬಗ್ಗೆ, ಸೃಷ್ಟಿಕರ್ತ್ರನ ಬಗ್ಗೆ, ಮನುಷ್ಯ ಮತ್ತು ಪ್ರಾಣಿ ಪ್ರಪಂಚದಲ್ಲಿರುವ ಎರಡು ಜಾತಿಗಳಾದ ಗಂಡು ಹೆಣ್ಣಿನ ಬಗ್ಗೆ, ನಾವು ಹುಟ್ಟುಹಾಕಿರುವ ಜಾತಿಗಳ ಬಗ್ಗೆ,  ಮುಕ್ಕೋಟಿ ದೇವರನ್ನು ಪೂಜಿಸುವ ನಾವು ದೇವರನ್ನು ಏಕೆ ಪೂಜಿಸುತ್ತೇವೆ? ಎಂಬಿತ್ಯಾದಿ ಪ್ರಶ್ನೆಗಳ ಸುರಿಮಳೆಯನ್ನೇ ಅಜ್ಜಿಗೆ ಕೇಳುತ್ತಾನೆ.  ಈ ಪ್ರಶ್ನೆಗಳಿಗೆಲ್ಲ ಅಜ್ಜಿಯ ಉತ್ತರವು, ಅವರ ಮಾತುಗಳು, ನಮ್ಮ ಸಂಸ್ಕೃತಿಯ ನಂಬಿಕೆಗಳನ್ನು ಮೀರಿದ ಉತ್ತರಗಳಾಗಿದ್ದವು.  ಅಜ್ಜಿಯ ಉತ್ತರವು ಕೆಲವೊಮ್ಮೆ ನಮ್ಮ ಆದಿ ಕಾಲದ ನಂಬಿಕೆಗಳನ್ನು ಪ್ರಶ್ನಿಸುವಂತಿದ್ದವು.  ಅವಾಸ್ತವಿಕ ಹೇಳಿಕೆಗಳಾಗಿದ್ದ ಅಜ್ಜಿಯ ಮಾತುಗಳನ್ನು ಕೇಳಿ ಊರಿನ ಜನರು ಅಜ್ಜಿಯನ್ನು ಎಂಬತ್ತರ ಮರಳು ಎಂದು ಕರೆಯುತ್ತಿದ್ದರು.  ಆದರೆ ಸುಬ್ಬರಾಯ ಅಜ್ಜಿಯ ಮಾತು, ಅವರ ಯೋಚನೆಯನ್ನು ನಿರಾಕರಿಸುತ್ತಿರಲಿಲ್ಲ.  ಅವನೇ ಹೇಳುವ ಹಾಗೆ ಅಜ್ಜಿಯ ಮಾತು ಹುಣಸೆಗೆ ಸಮ, ಅವರ ಮಾತು ಹುಳಿ ಸಿಹಿ ಬೆರೆತ ಮಾತು.  ಅನ್ನಿಸಿದ್ದನ್ನು ನೇರವಾಗಿ ನುಡಿಯುವುದು ಅವರ ರೂಡಿ.  ಜನ ಏನೇ ಹೇಳಿದರು ಅಜ್ಜಿಯ ಬಗ್ಗೆ ಅಪಾರ ಗೌರವ ಇರಿಸಿಕೊಂಡಿದ್ದನು.

ಅಜ್ಜಿಯ ಇನ್ನೊಂದು ಗುಣವೆಂದರೆ ಅವರು ಯಾವುದೇ ವಸ್ತುವನ್ನು ಮುಟ್ಟಿದರು ಸಹ, ಅದರ ಸಂಪೂರ್ಣ ಚರಿತ್ರೆ, ಇತಿಹಾಸ ಎಲ್ಲವೂ ಅವರ ಕಣ್ಣಮುಂದೆ ಬಂದು ನಿಲ್ಲುತ್ತಿತ್ತು.  ಕಣ್ಣು ಮುಚ್ಚಿಕೊಂಡು ಅವರಿಗೆ ಏನೇನು ಕಾಣುತ್ತದೋ ಅವೆಲ್ಲವನ್ನು ನುಡಿಯುತ್ತಿದ್ದರು.  ಇತಿಹಾಸ ಓದಿಕೊಂಡಿದ್ದ ಸುಬ್ಬರಾಯನು ಅಜ್ಜಿಗೆ ಏನೇನೊ ತಂದುಕೊಟ್ಟು, ಅದರ ಇತಿಹಾಸ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದನು.  ಮೂಡೂರಿನ ಮನೆಯ ಎದುರು ಇದ್ದ ಐನೂರು ವರ್ಷದ ಹಳೆಯ ಅಶ್ವತ್ಧದ   ಕಟ್ಟೆ, ಅಜ್ಜಿಯ ಎಂಬತ್ತು ವರ್ಷಗಳ ತಾಣವಾಗಿತ್ತು.  ಐನೂರು ವರ್ಷದ ಇತಿಹಾಸಕ್ಕೂ, ಅಜ್ಜಿ ಮೊಮ್ಮಗನ ಮಾತುಕತೆಗೂ ಈ ಅಶ್ವತ್ಧದ  ಕಟ್ಟೆ ಸಾಕ್ಷಿಯಾಗಿ ನಿಂತಿತ್ತು.

ಅಜ್ಜಿ ಹುಟ್ಟಿ ಬೆಳೆದದ್ದೇಲ್ಲ ಇಲ್ಲಿಯೇ, ಮೂಕಾಂಬಿಕೆ ಎಂಬ ಹೆಸರನ್ನಿಟ್ಟಿದ್ದ ಅವರ ತಂದೆ, ಹತ್ತು ವರ್ಷಕ್ಕೆ ಅವರನ್ನು ಲಗ್ನಮಾಡಿಸಿ ಮಾವನ ಮನೆಗೆ ಕಳಿಸಿದ್ದರು.  ಲಗ್ನವಾದ ಕೇವಲ ನಾಲಕ್ಕು ತಿಂಗಳಿಗೆ ಅವರ ಗಂಡ ತಿರಿಕೊಳ್ಳುತ್ತಾನೆ.  ಯವ್ವನ ಸ್ಥಿತಿಗೆ ಬರುವಷ್ಟರಲ್ಲೆ ಇಷ್ಟೆಲ್ಲ ಆದ ಅಜ್ಜಿಯನ್ನು ಮತ್ತೆ ಮೂಡೂರಿಗೆ ಅವರ ತಂದೆ ಕರೆತರುತ್ತಾರೆ.  ಅಲ್ಲಿಂದ ಇಲ್ಲಿಯವರೆಗೂ ಅಜ್ಜಿಗು ಮತ್ತು  ಐನೂರು ವರ್ಷ ಹಳೆಯದಾದ ಅಶ್ವತ್ಧದ ಕಟ್ಟೆಗೂ ಅವಿನಾಭಾವ ಸಂಭಂದ.  ಅವರ ಜೀವನದಲ್ಲಿ ಎಷ್ಟೋ ವರ್ಷ ಮಾತನಾಡದೇ ಇದ್ದಾಗ, ಊರಿನ ಜನರು ಅಜ್ಜಿಗೆ ಇಟ್ಟ ಹೆಸರು ಮೂಕಜ್ಜಿ ಎಂದು.  ಅದೇ ಅನ್ವರ್ಥನಾಮ ರೂಡಿಯಾಗಿ, ಅವರು ಮೂಕಜ್ಜಿ ಎಂದೇ ಪ್ರಸಿದ್ದಿಯಾದರು.  ಯವ್ವನವನ್ನು ಅನುಬವಿಸದೆ ಇದ್ದರೂ ಕೂಡ, ಅಜ್ಜಿಯ ಗಂಡು, ಹೆಣ್ಣು ಎಂಬ ಎರಡು ಜಾತಿಗಳ ಮೇಲೆ ಇದ್ದ ಯೋಚನ ಲಹರಿ ಸುಬ್ಬರಾಯನಿಗೆ ಆಶ್ಚರ್ಯವನ್ನುಂಟುಮಾಡುತಿತ್ತು.  ಕಾದಂಬರಿಯಲ್ಲಿ ಬರುವ  ಸುಬ್ಬರಾಯನ ಹೆಂಡತಿ ಸೀತೆ, ಬಾಲ್ಯ ಸ್ನೇಹಿತ ಜನ್ನ, ತಮ್ಮ ನಾರಾಯಣ, ಹಾಗೂ ನಾಗಿ, ರಾಮಣ್ಣನ ಕತೆಗಳು ಅಜ್ಜಿಯ ಯೋಚನೆಗಳಿಗೆ ಸಾಕ್ಷಿಯನ್ನೋದಗಿಸುತ್ತವೆ.  ಕಾರಂತರು ಕಾದಂಬರಿಯ ಮೊದಲೇ ಹೇಳುವಹಾಗೆ ಇಂತಹ ಅಜ್ಜಿಯೊಬ್ಬಳು ಇದ್ದಾಳೆಯೇ ಎಂಬ ಸಂಶಯ ಇದ್ದರೆ, ನಮ್ಮ ಸಂಸ್ಕೃತಿಯ ನಂಬಿಕೆಗಳ ಕುರಿತಾದ ಸಂಶಯ ಪಿಶಾಚಿಯ ರೂಪವೇ ಅವಳೆಂದು ತಿಳಿಯಬಹುದು ಎಂದಿದ್ದಾರೆ.

ನಮ್ಮ ಯೋಚನ ಲಹರಿಗಳನ್ನು ಪಾತ್ರಗಳಾಗಿ ಬಿಂಬಿಸಿದ ಕಾರಂತರು, ಸಂಸ್ಕೃತಿಯ ನಂಬಿಕೆಗಳನ್ನು ಮೀರಿದ ಉತ್ತರಗಳನ್ನು ಕೊಡುವ ಅಜ್ಜಿಯ ನಂಬಿಕೆಗಳು, ಎಷ್ಟೋ ವರ್ಷಗಳ ಸೃಷ್ಟಿಯ ಇತಿಹಾಸವನ್ನು ಹುಡುಕುವ ಅಜ್ಜಿಯ ಕನಸುಗಳು, ನಮ್ಮ ಬಹುಕಾಲ ರೂಡಿಯಲ್ಲಿದ್ದ ನಂಬಿಕೆಗಳ ಮೇಲೆ ಪ್ರಶ್ನೆ ಮೂಡುವಂತೆ ಮಾಡುತ್ತದೆ.  ಅವಳ ಯೋಚನೆ, ಕನಸುಗಳನ್ನು ತಿಳಿಯಬೇಕಾದರೆ ಒಮ್ಮೆ ಪುಸ್ತಕವನ್ನು ಓದಿ ನೋಡಿ.

ಇಂತಹ ಪ್ರಬುದ್ಧ ಕಾದಂಬರಿಗೆ ಭಾರತ ಸರ್ಕಾರವು 1978 ರಲ್ಲಿ ಜ್ಞಾನಪೀಠ ಪ್ರಶಸ್ತಿ ನೀಡಿ ಗೌರವಿಸಿತು.  ಕನ್ನಡಕ್ಕೆ ಮೂರನೆಯ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕೀರ್ತಿ ಶಿವರಾಮ ಕಾರಂತರದಾಗಿತ್ತು.  ನಾ ಓದಿದ ಮೊದಲ ಜ್ಞಾನಪೀಠ ಪುರಸ್ಕೃತ ಕಾದಂಬರಿ ಇದು.

-ವಿಶ್ವ ಕೀರ್ತಿ .ಎಸ್
(06/08/2013)

Advertisements