ನಿರುತ್ತರ, ಹ್ಯಾಂಡ್ ಪೋಸ್ಟ್, ಮೂಡಿಗೆರೆ.

1

IMG_2376
ನಿರುತ್ತರದ ಮುಖ್ಯದ್ವಾರ
IMG_2373
ಒಳಗೆ ನೆಡೆದುಹೋಗುವ ದಾರಿ

2

IMG_2340
ರಾಜೇಶ್ವರಿ ತೇಜಸ್ವಿ ಮತ್ತು ತೇಜಸ್ವಿಯ ಫೋಟೋ

3

4

IMG_2366
ನಿರುತ್ತರದ ಮನೆಯ ಮುಂಬಾಗದ ನೋಟ
IMG_2359
ಮನೆಯ ಹಿಂದಿನ ನೋಟ
IMG_2361
ಕಾಫಿ ಒಣಗಿಸುವ ಜಾಗ
IMG_2350
ತೇಜಸ್ವಿಯೇ ಕಟ್ಟಿಸಿದ ಕೆರೆಯ ವಿಹಂಗಮ ನೋಟ
IMG_2354
ಅಡಿಕೆ ತೋಟ
IMG_2341
ನವೀನ, ರಾಜೇಶ್ವರಿ ತೇಜಸ್ವಿರವರು ಮತ್ತು ನಾನು


ವಿಶ್ವಕೀರ್ತಿ ಎಸ್
08/02/2014

Advertisements

ನಾಡ ಹಬ್ಬ ದಸರಾ ನೋಡಿದೆನೋ..!

ಜಗತ್ಪ್ರಸಿದ್ದ ವಿಜಯನಗರ ಸಾಮ್ರಾಜ್ಯದ ವೈಭವದ ದಸರಾ ಮಹೋತ್ಸವವನ್ನು ಹಂಪಿಯ ಮಹಾನವಮಿ ದಿಬ್ಬದಿಂದ ಸಾಂಸ್ಕೃತಿಕ ನಗರಕ್ಕೆ (ಮೈಸೂರು) ತಂದವರು ಮೈಸೂರು ರಾಜವಂಶಸ್ಥರು.  ನಾಲ್ಕು ನೂರು ವರ್ಷಗಳ ಸಾಂಸ್ಕೃತಿಕ ಇತಿಹಾಸವಿರುವ ಈ ಹಬ್ಬವನ್ನು ಅಂದಿನಿಂದ ಇಂದಿನವರೆಗೂ ಅದ್ದೂರಿಯಾಗಿ ಆಚರಿಸಲಾಗುತ್ತಿದೆ.  ಅಖಂಡ ಕರ್ನಾಟಕವಾಗಿರುವ ಈಗಿನ ಕರ್ನಾಟಕದಲ್ಲಿ ದಸರಾ  ಮಹೋತ್ಸವ ನಾಡ ಹಬ್ಬವಾಗಿದೆ.  ಕನ್ನಡ ನಾಡಿನ ಜನರ ಸಂಸ್ಕೃತಿ, ಸಾಹಿತ್ಯ, ಕಲೆ, ದೇಸಿ ಕ್ರೀಡೆ, ಮತ್ತು ಪ್ರೀತಿ-ವಾತ್ಸಲ್ಯವನ್ನು ಪ್ರಪಂಚಕ್ಕೆ ಪ್ರತಿಬಿಂಬಿಸುವ ನಾಡ ಹಬ್ಬ ದಸರಾ.  ಈ ಹಬ್ಬವನ್ನು ಕಂಡ ಯಾರಿಗಾದರೂ, ಬೆಲೆ ಕಟ್ಟಲಾಗದ ನಮ್ಮ ಸಂಸ್ಕೃತಿಯ ಹಿರಿಮೆ ಎಷ್ಟು ದೊಡ್ಡದು ಎಂದು ತಿಳಿಯುವುದರಲ್ಲಿ ಸಂದೇಹವಿಲ್ಲ.  ಇಂತಹ ನಾಡಿನಲ್ಲಿ ಹುಟ್ಟಿರುವ ನಾವೆಲ್ಲರೂ ನಿಜವಾಗಲೂ ಧನ್ಯರು.  ನಾಡ ಹಬ್ಬ ದಸರಾ ಬಗ್ಗೆ ಒಂದು ಸಣ್ಣ ಕವಿತೆ ನನ್ನ ಪದಗಳಲ್ಲಿ…

“ಚಿನ್ನದಂಬಾರಿಯ ಚೆಂದದ ಚಾಮುಂಡಿ ನೋಡಿದೆನೋ
ಅನೆದಿಂಡುಗಳ ವಜ್ರ ಕವಛವ ನೋಡಿದೆನೋ 
ನಕ್ಷತ್ರದಿಂದೊಳೆವ ಅಂದದ ಅರಮನೆ ನೋಡಿದೆನೋ 
ಸಂಗೀತ, ಸಾಹಿತ್ಯದ ರಸ ಅನುಭವ  ತಿಳಿಯಿತೇನೋ
ಜನ ಮನಗಳ ನಮ್ಮ ಸಂಸ್ಕೃತಿ ಅರಿಯಿತೇನೋ
ವೈಭವದ ನಾಡ ಹಬ್ಬ ದಸರಾ ನೋಡಿದೆನೋ.”

ಇದನ್ನು ನಾನು 2002 ರಲ್ಲಿ (ಎಂಟನೇ ತರಗತಿ) ಬರೆದದ್ದು.
ವೈಭವದ ದಸರಾ ಜಂಬೂ ಸವಾರಿಯನ್ನು ನಾನು ಮೊದಲ ಬಾರಿ ಕಂಡದ್ದು 2011ರಲ್ಲಿ.  ನನ್ನ ಸ್ನೇಹಿತರೊಂದಿಗೆ ಮೈಸೂರಿಗೆ ಹೋಗಿ ಜಂಬೂ ಸವಾರಿ ನೋಡಿದ್ದೇ,  ಹಾಗೆ ಹೋದಾಗ ತೆಗೆದ ಕೆಲವು ಆಯ್ದ ಚಿತ್ರಗಳು ಇಲ್ಲಿವೆ.

317726_265337466844012_1257209185_n

303189_265337530177339_902859806_n

296409_265337183510707_468436281_n

314940_265335410177551_1206104438_n

302650_265336206844138_1116133474_n

314958_265336496844109_625956702_n

291985_265336573510768_579843924_n

308614_265336870177405_571573666_n

2011ರಲ್ಲಿ ನಮ್ಮ ತಂಡ (ಎಡಗಡೆಯಿಂದ: ತಿಲಕ್, ದೀಪಕ್, ನವೀನ, ವಿಶ್ವ ತೇಜ, ನವೀನ)

ಈಗಿನ ದಸರಾ 403ನೇ ವರ್ಷದ ಮಹೋತ್ಸವ.  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ  ಡಾ. ಚಂದ್ರಶೇಖರ ಕಂಬಾರರು ಈ ವರ್ಷದ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ.  ಸಾದ್ಯವಾದರೆ ಮೈಸೂರಿಗೆ ಹೋಗಿ ನೋಡಿ ಬನ್ನಿ.

ಎಲ್ಲರಿಗೂ ದಸರಾ ಹಬ್ಬದ ಹಾರ್ಥಿಕ ಶುಭಾಶಯಗಳು.


-ವಿಶ್ವಕೀರ್ತಿ ಎಸ್.
03/10/2013

ನೀ ಮಾಯೆಯೊಳಗೊ ಮಾಯೆ ನಿನ್ನೊಳಗೊ..!

ಬೆಂಗಳೂರಿನಿಂದ 80 ಕಿಲೋಮೀಟರು ಮೈಸೂರು ಮಾರ್ಗವಾಗಿ ಹೋದರೆ ಶಿವಪುರ (ಮದ್ದೂರು) ಎಂಬ ಐತಿಹಾಸಿಕ ನಗರ ಸಿಗುತ್ತದೆ (ನಮ್ಮೂರು ಕೂಡ ಮದ್ದೂರು).  ಅಲ್ಲಿಂದ ರೈಲ್ವೆ ಹಳಿ ದಾಟಿ ಹತ್ತು ಕಿಲೋಮೀಟರು ಬಂದರೆ ಬೆಸಗರಹಳ್ಳಿ ಎಂಬ ಒಂದು ಚಿಕ್ಕ ಹಳ್ಳಿ ಸಿಗುತ್ತದೆ.  ಏಪ್ರಿಲ್ ತಿಂಗಳಿನಲ್ಲಿ (16-22 ಏಪ್ರಿಲ್ 2013) ಆ ಒಂದು ವಾರ ನಾನು ಕಳೆದದ್ದು ಇದೆ ಜಾಗದಲ್ಲಿ.  ನವೋದಯ ಶಾಲೆಗೆ ಹೊಂದಿಕೊಂಡಂತೆ ಇರುವ ಶಿವಾರಗುಡ್ಡ ಮತ್ತು ವಿದ್ಯಾಪೀಠದಲ್ಲೇ, ನಾನು ಒಂದು ವಾರ ಹೊರಗಿನ ಪ್ರಪಂಚದ ಅರಿವೆ ಇಲ್ಲದಂತೆ ಇದ್ದದ್ದು.  ಡಾ. ಬೆಸಗರಹಳ್ಳಿ ರಾಮಣ್ಣ ಟ್ರಸ್ಟ್ ರವರು ಸರ್ಕಾರಿ ಶಾಲೆಯ ಮಕ್ಕಳಿಗಾಗಿ ಒಂದು ವಾರದ “ಅರಿವು ಸಂಭ್ರಮ” ಎಂಬ ಬೇಸಿಗೆ ಶಿಬಿರವನ್ನು ಆಯೋಜಿಸಿದ್ದರು. ಆ ಶಿಬಿರದಲ್ಲಿ ಮಕ್ಕಳಿಗೆ ವಿಜ್ಞಾನವನ್ನು ಹೇಳಿಕೊಡುವುದಕ್ಕೆ ನಾನು, ನನ್ನ ಸ್ನೇಹಿತರಾದ ಕಿರಣ್, ಅಶ್ವಿನಿ, ನಮ್ಮ ಸಾಮಾನು ಸರಂಜಾಮುಗಳೊಂದಿಗೆ ಬೆಸಗರಹಳ್ಳಿಗೆ ಬಂದಿದ್ದೆವು.  ಪದ್ಮ, ಉಮೇಶ್, ಅನಿಲ್, ಮಹಮ್ಮುದ್ ಮತ್ತು ಗುರು ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದ್ದು ಇಲ್ಲಿಯೇ.  ಮೊದಲ ಇಬ್ಬರು ಮಕ್ಕಳಿಗೆ ಇಂಗ್ಲೀಷ್ ಹೇಳಿಕೊಡಲು ಬಂದಿದ್ದರು, ಕೊನೆಯ ಮೂವರು ‘ಕಲೆ’ ಯನ್ನು ಕಲಿಸುವುದಕ್ಕೆ ಬಂದಿದ್ದರು.  ಪದ್ಮ ಮತ್ತು ಉಮೇಶ್ ಪ್ರತಿದಿನ ಬೆಳಗ್ಗೆ ಇಂಗ್ಲೀಷ್ ಪಾಠವನ್ನು ಮಕ್ಕಳಿಗೆ ಹೇಳಿಕೊಟ್ಟ ಮೇಲೆ ತಮ್ಮ ವೈಯಕ್ತಿಕ ಕೆಲಸದಲ್ಲಿ ಮಗ್ನರಾಗುತ್ತಿದ್ದರು.  ನಾವು ನಮ್ಮ ತರಗತಿಗಳೆಲ್ಲ ಮುಗಿದಮೇಲೆ, ಅವರ ಬಳಿ ಹೋಗಿ ಅವರನ್ನು ಮಾತಿಗೆ ಎಳೆಯುತ್ತಿದ್ದೆವು.  ಕನ್ನಡದ ಒಂದು ಸಿನಿಮಾಗೆ ಇಂಗ್ಲೀಷ್ ನ ಸಬ್-ಟೈಟಲ್ (Subtitle) ಕೊಡುವುದು ಆ ವಾರದ ಅವರ ಕೆಲಸವಾಗಿತ್ತು.  ಸಿನಿಮಾದ ಪೂರ್ತಿ ಆಡಿಯೋ ಫೈಲ್ ಅನ್ನು ಇಯರ್ ಫೋನ್ ಮುಕಾಂತರ ಕೇಳಿ, ಪ್ರತಿಯೊಂದು ಪದವನ್ನು ಇಂಗ್ಲೀಷ್ ಗೆ ಮಾರ್ಪಡಿಸುವುದು ಅವರ ಕೆಲಸವಾಗಿತ್ತು.  ಯಾವ ಸಿನಿಮಾವನ್ನು ಮಾಡುತ್ತಿದ್ದೀರಿ ಎಂದು ಕೇಳಿದಾಗ ಅವರಿಂದ ಬಂದ ಉತ್ತರ ಲೂಸಿಯಾ!

Group Photo

(ಎಡಗಡೆಯಿಂದ: ಕಿರಣ್, ಪದ್ಮ, ಉಮೇಶ್, ಅಶ್ವಿನಿ, ಮಹಮ್ಮದ್, ಗುರು, ಅನಿಲ್ ಶಿವಾರಗುಡ್ಡದ ಮೇಲೆ ತೆಗೆದ ಚಿತ್ರ )

ಬೆಳಗ್ಗೆ ಎದ್ದಿ ಕಿರಣ್ ಮನೆಗೆ ಹೋಗಬೇಕು ಎಂದು, ಬೇಗ ಬೇಗ ನನ್ನ ಎಲ್ಲ ಕೆಲಸ ಮುಗಿಸಿ ಕಿರಣ್ಗೆ ಕಾಲ್ ಮಾಡಿ ನಾನು ಹನ್ನೊಂದೂವರೆ ಹಂಗೆ ನಿಮ್ಮ ಮನೆಗೆ ಬರ್ತೀನಿ ಅಂತ ಹೇಳಿದೆ.  ಆ ದಿನ ಕಂಪ್ಯೂಟರ್ ನಲ್ಲಿ ಒಂದು ಹೊಸ ಅಪ್ಲಿಕೇಷನ್ ತುಂಬಿಸಿ, ಅದನ್ನು ಬಳಸುವುದು ಹೇಗೆ ಎಂದು ಕಲಿಯುವುದು ನಮ್ಮ ಉದ್ದೇಶವಾಗಿತ್ತು.  ಕಂಪ್ಯೂಟರ್ ಮತ್ತು ಅದಕ್ಕೆ ಬೇಕಾದ ಹಾರ್ಡ್ ಡಿಸ್ಕ್ ಎಲ್ಲವನ್ನೂ ತೆಗೆದುಕೊಂಡು ಕಿರಣ್ ಮನೆಗೆ ಹೊರಟೆ.  ರಾಜರಾಜೇಶ್ವರಿ ನಗರದಲ್ಲಿದ್ದ ಅವರ ಮನೆಗೆ ಮಲ್ಲೇಶ್ವರದಿಂದ ಹೋಗಲು ಒಂದು ತಾಸು ಬೇಕಾಯಿತು.  ಅವರ ಮನೆ ಒಳಗೆ ಹೋಗುತ್ತಿದ್ದಾಗಲೇ, ಕಿರಣ್ ಯಾವುದೋ ಒಂದು ಸಿನಿಮಾದ ವೆಬ್-ಪೇಜ್ ಮೇಲೆ ಕಣ್ಣಾಡಿಸುತ್ತಿದ್ದ.  ನಿನಗೆ ಈ ಸಿನಿಮಾದ ಬಗ್ಗೆ ಹೇಳ್ತೀನಿ ಪಕ್ಕದಲ್ಲಿ ಕುಳಿತುಕೋ ಅಂದ.  ಆ ಸಿನಿಮಾ ಬೇರೆ ಸಿನಿಮಾದ ತರ ಇರಲಿಲ್ಲ.  ಅದಕ್ಕೆ ನಿರ್ಮಾಪಕರು ಪ್ರೇಕ್ಷಕರು! ಅಂದರೆ ಪ್ರೇಕ್ಷಕರಿಂದಲೇ ನಿರ್ಮಿತವಾದ ಮೊದಲ ಭಾರತೀಯ ಸಿನಿಮವಾಗಿತ್ತು.  ಯಾರು ಬೇಕಾದರೂ ಆ ಸಿನಿಮಾಗೆ ಹಣ ಕೊಡಬಹುದಾಗಿತ್ತು.  ಕಿರಣ್ ಕೂಡ ಹಣ ಕೊಟ್ಟು, ತನ್ನ ಹೆಸರನ್ನು ಆ ವೆಬ್-ಪೇಜ್ ನಲ್ಲಿ ಮೂಡಿಸಿದ್ದ.  ಅಧಿಕೃತವಾಗಿ ಕಿರಣ್ ಕೂಡ ಆ ಸಿನಿಮಾದ ನಿರ್ಮಾಪಕನೆಂದು ನನಗೆ ಹೆಮ್ಮೆ ಮೂಡಿತ್ತು.  ಇದೊಂದು ಕನ್ನಡ ಸಿನಿಮಾ ಎಂಬುದು ಮತ್ತೊಂದು ಹೆಮ್ಮೆಯ ವಿಚಾರ.  ಸಿನಿಮಾದ ಹೆಸರು ಲುಸಿಯಾ ಎಂದು ಆ ವೆಬ್-ಪೇಜ್ ನಲ್ಲಿ ಅಚ್ಚುಕಟ್ಟಾಗಿ ಮೂಡಿತ್ತು.  ಅರೇ, ಇದು ಪದ್ಮ ಮತ್ತು ಉಮೇಶ್ ಬೆಸಗರಹಳ್ಳಿಯಲ್ಲಿ ಸಬ್-ಟೈಟಲ್ ಹಾಕುತ್ತಿದ್ದರಲ್ಲ ಅದೇ ಸಿನಿಮಾನ ಎಂದೇ.  ಅವನು ಹೌದು ಇದೆ ಆ ಲೂಸಿಯಾ ಸಿನಿಮ ಎಂದ.  ಪ್ರಪಂಚದ ಬೇರೆಡೆ ಇದು ಆಗಲೇ ಬಿಡುಗಡೆಯಾಗಿತ್ತು.  ಭಾರತದಲ್ಲಿ ಇನ್ನೂ ಬಿಡುಗಡೆಯಾಗಿರಲಿಲ್ಲ.  ಆ ದಿನವೆಲ್ಲ ನಮ್ಮ ಕೆಲಸವನ್ನು ಮರೆತು ಲೂಸಿಯಾಗೆ ಮುಡಿಪಾಗಿಟ್ಟಿದ್ದೆವು.

ಸಪ್ಟೆಂಬರ್ ಒಂಬತ್ತು, ಎಲ್ಲೆಡೆ ಗಣೇಶ ಹಬ್ಬದ ಸಂಭ್ರಮ ಮತ್ತು ಲೂಸಿಯಾ ಸಿನಿಮ ಭಾರತದಲ್ಲಿ ಬಿಡುಗಡೆಯಾಗಿ ಮೂರು ದಿನವಾಗಿತ್ತು.  ಇದರ ಜೊತೆಗೆ ಕಿರಣ್ ಹುಟ್ಟುಹಬ್ಬನು ಸೇರಿಕೊಂಡಿಬಿಟ್ಟಿತ್ತು.  ಸರಿ, ಅವನ ಮನೆಗೆ ಹೋಗುವ ಎಂದು ಹೊರಟು ನಿಂತೆ.  ಮಧ್ಯಾನ ಎರಡು ಘಂಟೆಗೆ ಅವನ ಮನೆ ಸೇರಿದ್ದೆ.  ಅವನಿಗೆ ಹುಟ್ಟು ಹಬ್ಬದ ಶುಬಾಶಯ ಹೇಳಿ ಏನು ಇವತ್ತಿನ ಪ್ಲಾನ್ ಎಂದೆ.  ಬಟ್ಟೆ ಹೊಗೆಯುವುದು ಏನಾದರೂ ಅಡಿಗೆ ಮಾಡಿ ತಿನ್ನುವುದು ಎಂದ.   ಅಡಿಗೆ ಆಮೇಲೆ ಮಾಡೋಣ ಎಂದು ಅವನ ಕಂಪ್ಯೂಟರ್ ತೆಗೆದು ನೋಡಿದೆ.  ಲೂಸಿಯಾ ಸಿನಿಮಾದ ‘ಅಭಿಪ್ರಾಯ’ ದ ಪೇಜ್ ಅವನ ಕಂಪ್ಯೂಟರ್ ಪೂರ್ತಿ ತುಂಬಿತ್ತು.  ಲಂಡನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡ ಮೊದಲ ಕನ್ನಡ ಸಿನಿಮ ಎಂಬ ವೆಬ್-ಪೇಜ್ ಪ್ರಮುಖವಾಗಿತ್ತು. ನಾನು ಥೆಟರ್ ಗೆ ಹೋಗಿ ಸಿನಿಮಾ ನೋಡಿದ್ದು ತುಂಬಾ ಕಡಿಮೆ.  ಹ್ಯಾರಿ ಪಾಟರ್ ನ ಕೊನೆಯ ಕಂತು ಬಿಡುಗಡೆಯಾದಾಗ ನವರಂಗ್ ಥೆಟರ್ ಗೆ ಹೋಗಿ 3ಡಿ ಸಿನಿಮಾ ನೋಡಿದ್ದೆ ಕೊನೆಬಾರಿ.  ಇ ಸಾರಿ ಲುಸಿಯಾ ಸಿನಿಮಾ ನೋಡೋಣ ಎಂದು ಇಬ್ಬರು ಯೋಚನೆ ಮಾಡಿ, ಮೈಸೂರು ರೋಡಲ್ಲಿರುವ ಗೋಪಾಲನ್ ಮಾಲ್ ನಲ್ಲಿ ಎರಡು ಟಿಕೆಟ್ ಖರೀದಿಸಿದೋ.

ವರ್ಷಕ್ಕೆ ಕಮ್ಮಿ ಅಂದರು ನೂರು ಸಿನಿಮಗಳು ಕನ್ನಡ ಭಾಷೆ ಒಂದರಲ್ಲೇ ತೆರೆ ಕಾಣುತ್ತವೆ.  ಕೆಲವು ಸಿನಿಮಾ ಒಳ್ಳೆಯದು ಬಂದರು, ಬಹಳಷ್ಟು ಸಿನಿಮಾ ರೀಮೇಕ್ ಸಿನಿಮಾ ಎಂಬ ಕೂಗು ಇದೆ.  ಇದೆಲ್ಲವನ್ನು ಕಂಡಾಗ ಕನ್ನಡದಲ್ಲಿ ಯಾಕೆ ಯಾರು ಸ್ವಂತಿಕೆಯಿಂದ ಸಿನಿಮಾವನ್ನು ತಯಾರಿಸುತ್ತಿಲ್ಲ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುವುದು ಸಹಜ.  ನನ್ನ ತಿಳುವಳಿಕೆಯ ಮಟ್ಟಿಗೆ ಇದಕ್ಕೆ ಉತ್ತರ ಎಂದರೆ, ಈಗಿನ ಕಮರ್ಷಿಯಲ್ ಜೀವನ ಕ್ರಮ ಮತ್ತು ಬೇಗ ಹಣ ಗಳಿಸಬೇಕೆಂಬುವ ಹಂಬಲ.  ಒಂದು ಭಾಷೆಯಲ್ಲಿ ಒಂದು ಸಿನಿಮ ಯಶಸ್ಸು ಕಂಡರೆ, ಅದನ್ನು ನಮ್ಮ ಭಾಷೆಯಲ್ಲು ತುರ್ಜುಮೆ ಮಾಡಿದರೆ ನಮಗೂ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ.  ಇ ನಂಬಿಕೆಗಳಿಂದಲೇ ಬಹಳಷ್ಟು ರೀಮೇಕ್ ಸಿನಿಮಾಗಳು ಹುಟ್ಟಿಕೊಳ್ಳುತ್ತವೆ. ರೀಮೇಕ್ ಸಿನಿಮಾ ಮಾಡುವುದು ತಪ್ಪಲ್ಲ, ಆದರೆ ರೀಮೇಕ್ ಸಿನಿಮಾಗಳು ಮಾಡುವುದರಿಂದ ನಮ್ಮ ಸ್ವಂತಿಕೆಯ ಯೋಚನಶೀಲವನ್ನು ಕಡೆಗಣಿಸುವುದು ತಪ್ಪು.  ಯಶಸ್ಸನ್ನು ಹಣದಿಂದ ಅಳೆಯುವುದು ಸಿನಿಮಾ ಜಗತ್ತಿನ ಮತ್ತೊಂದು ಕಲ್ಮಶದ ಮುಖ ಎಂದು ನನ್ನ ಅನಿಸಿಕೆ.  ಸ್ವಂತಿಕೆಯಿಂದ ತಯಾರಿಸಿದ ಸಿನಿಮಾವನ್ನು ಜನರು ತಿರಸ್ಕರಿಸುತ್ತಾರೆ ಎನ್ನುವ ಭಯ ನಿರ್ದೇಶಕರಲ್ಲಿ/ನಿರ್ಮಾಪಕರಲ್ಲಿ ಇರಬಹುದು, ಆದರೆ ಅದು ಅವರ ನಂಬಿಕೆ ಮಾತ್ರ.  ಯಾವುದೇ ಭಾಷೆಯಲ್ಲಿ ಸೃಜನಶೀಲ ಬರವಣಿಗೆಯಿಂದ ಮೂಡಿದ ಸಮೃದ್ದ ಕಥೆಯುಳ್ಳ ಸಿನಿಮಾವನ್ನು ಆ ಭಾಷೆಯ ಜನ ತಿರಸ್ಕರಿಸುವುದಿಲ್ಲ ಎಂಬುದು ನನ್ನ ಅನಿಸಿಕೆ.  ಅಂತಹ ಸಿನಿಮಾ ತೆರೆ ಕಾಣದಿದ್ದರು ಅದಕ್ಕೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಬಲವಿರುತ್ತದೆ.  ಕನ್ನಡದಲ್ಲೇ ಇದಕ್ಕೆ ಎಷ್ಟೋ ಉದಾರಣೆಗಳು ಸಿಗುತ್ತವೆ. ಲೂಸಿಯಾ ಕೂಡ ಪವನ್ ಕುಮಾರ್ ಎಂಬ ಸೃಜನಶೀಲ ಬರವಣಿಗೆಕಾರ ಹುಟ್ಟು ಹಾಕಿದ ಕಥೆ, ನಿರ್ದೇಶನ ಕೂಡ ಅವರದೇ, ಆದರೆ ನಿರ್ಮಾಪಕರು ಮಾತ್ರ ಪ್ರೇಕ್ಷಕರು!

ಲೂಸಿಯಾ ಎರಡುಗಂಟೆ ಇಪ್ಪತ್ತು ನಿಮಿಷದ ಕನ್ನಡ ಸಿನಿಮ.  ಭಾರತದ ಮೊದಲ ಪ್ರೇಕ್ಷಕ ನಿರ್ಮಿತ ಸಿನಿಮ.  ಇಲ್ಲಿ ತೆರೆ ಕಾಣುವು ಮುಂಚೆಯೇ ಬೇರೆ ದೇಶದಲ್ಲಿ ಕನ್ನಡದ ಪತಾಕೆಯನ್ನು ಹಾರಿಸಿದ ಸಿನಿಮ.  ಪೂರ್ತಿ ಸಿನಿಮ ಕ್ಯಾನನ್ 5ಡಿ (Canon 5D) ಯಲ್ಲೇ ಚಿತ್ರೀಕರಣವಾಗಿರುವುದು ವಿಶೇಷ.  ಬಹಳ ಮುಖ್ಯವೆಂದರೆ ವ್ಯಕ್ತಿ ಪ್ರಧಾನವಲ್ಲದೆ, ಕಥೆ ಪ್ರಧಾನವಾದ ಸಿನಿಮಾ ಎಂಬುದು ಇದರ ಹೆಗ್ಗಳಿಕೆ.  ‘ಕನಕದಾಸರ’ 15ನೆ ಶತಮಾನದ “ ನೀ ಮಾಯೆಯೊಳಗೊ ಮಾಯೆ ನಿನ್ನೊಳಗೊ, ನೀ ದೇಹದೊಳಗೊ ದೇಹ ನಿನ್ನೊಳಗೊ…” ಎಂಬ ವಚನದಿಂದ ಪ್ರೇರೇಪಿತವಾಗಿ ರಚಿಸಿದ ಕಥೆ ಲೂಸಿಯಾ.  ಮೇಲ್ನೋಟಕ್ಕೆ ಪ್ರೀತಿ ಪ್ರೇಮದ ಕಥೆತರನೆ ಕಾಣುವ ಸಿನಿಮ, ಬರೀ ಪ್ರೀತಿ ಪ್ರೇಮದ ಕಥೆಯಲ್ಲ.  ಪ್ರೇಕ್ಷಕರನ್ನು ಗೊಂದಲಮಯದಲ್ಲೇ ಕರೆದುಕೊಂಡು ಹೋಗುವ ‘ಕಪ್ಪು ಬಿಳುಪು ಮತ್ತು ಬಣ್ಣದ’ ಸಿನಿಮ ಕೊನೆಗೆ ಕೊಡುವ ಸಂದೇಶ  “ನಿಮ್ಮ ಚಿಕ್ಕ ಜೀವನ, ಇನ್ನೊಬ್ಬರ ದೊಡ್ಡ ಆಸೆ” (Yours Small Life is Someone’s Big Dream) ಅದ್ಬುತವಾಗಿದೆ.  ಯಾವಾಗಲಾದರೂ ಬಿಡುವು ಸಿಕ್ಕಾಗ ಒಮ್ಮೆ ಹಾಗೆ ಸಿನಿಮಾ ನೋಡಿ ಬನ್ನಿ.

Lucia-Poster

ಸಿನಿಮಾ ನೋಡುತ್ತಿದ್ದಾಗ, ಬೆಸಗರಹಳ್ಳಿಯಲ್ಲಿ ಪರಿಚಯವಾದ ಉಮೇಶ್ ಇದರಲ್ಲಿ ನಟಿಸಿರುವುದು ನೋಡಿ ಫುಲ್ ಖುಷಿಯಾಗಿದ್ದೆ.  ಸಿನಿಮಾ ನೋಡಿ ಬಂದಮೇಲೆ ನನ್ನ ಸ್ನೇಹಿತ ದೀಪಕ್ ಕೂಡ, ನಾನು ಒಂದು ಸೀನ್ ನಲ್ಲಿ ಬಂದು ಹೋಗ್ತೀನಿ ನಿನ್ ನೋಡಿದಾ ಅಂದ. ಅದನ್ನು ಗಮನಿಸಲು ಮರೆತಿದ್ದೆ.


ವಿಶ್ವ ಕೀರ್ತಿ ಎಸ್
23/09/2013

“ಕವಿಶೈಲ”ದಲ್ಲೊಂದು ಸುತ್ತು…

ಬಹಳ ತಿಂಗಳಿಂದ ನನಗೊಂದು ಮಹಾದಾಸೆ ಇತ್ತು.  ಅದೇನೆಂದರೆ ಕುಪ್ಪಳಿಗೆ ಹೋಗಿ ಕವಿಮನೆ ಮತ್ತು ಕವಿಶೈಲ ದಲ್ಲಿ ಓಡಾಡಿಕೊಂಡು ಬರಬೇಕು ಅಂತ.  ಎಸ್ಟೋ ಸಾರಿ ಕುಪ್ಪಳಿಗೆ ಹೊಗೋದಕ್ಕೆ ತಯಾರಿ ಮಾಡಿಕೊಂಡರೂ, ಕೊನೆಯಲ್ಲಿ ವೈಯಕ್ತಿಕ ಕಾರಣಗಳಿಂದ ಪ್ರವಾಸ ಮುರಿದುಬಿಳುತಿತ್ತು.  ಕೊನೆಗೆ ನಾನು ನನ್ನ ಸ್ನೇಹಿತ ಕಿರಣ್, ಏನಾದರೂ ಆಗಲಿ ಈ ವಾರ ಶಿವಮೊಗ್ಗಕ್ಕೆ ಪ್ರವಾಸ ಹೋಗಲೇಬೇಕು ಎಂದುಕೊಂಡು, ಎರಡು ದಿನದ ಮಟ್ಟಕ್ಕೆ ಶಿವಮೊಗ್ಗದ ನಕಾಶೆ ತಯಾರು ಮಾಡಿ, ಅದರಲ್ಲಿ ಕುಪ್ಪಳಿಗೆ ಅರ್ದ ದಿನ ಮೀಸಲಿಟ್ಟು ಪ್ರವಾಸಕ್ಕೆ ಹೊರಟೆವು.

IMG_0530
ನಮ್ಮ ಶಿವಮೊಗ್ಗದ ನಕಾಶೆ

ತೀರ್ಥಹಳ್ಳಿಹಿಂದ ಕೇವಲ ಹದಿನೈದು ಕಿಲೋಮೀಟರ್ ಕೊಪ್ಪ ಮಾರ್ಗವಾಗಿ ಹೋದರೆ ಕುಪ್ಪಳಿ ಕ್ರಾಸ್ ಸಿಗುತ್ತದೆ.  ಅಲ್ಲಿಂದ ಎರಡು ಕಿಲೋಮೀಟರ್ ಒಳಗೆ ನೆಡೆದುಕೊಂಡು ಹೋದರೆ ಕುಪ್ಪಳಿ ಸಿಗುತ್ತದೆ.  ಇಲ್ಲಿಯೇ ಇರುವುದು ರಾಷ್ಟ್ರಕವಿ ಕುವೆಂಪುರವರು ತಮ್ಮ ಹದಿನೈದು ವರ್ಷದ ಬಾಲ್ಯವನ್ನು ಕಳೆದ ಮನೆ ಮತ್ತು ಅವರಿಗೆ ಅತ್ಯಂತ ಪ್ರಿಯವಾದ, ತಮ್ಮ ಎಲ್ಲಾ ಮಹಾಕಾವ್ಯ, ಕಾದಂಬರಿ, ಪದ್ಯಗಳಿಗೆ ಸ್ಪೂರ್ತಿ ಕೊಟ್ಟ ಕವಿಶೈಲ ಸ್ಥಳ.

IMG_9973
ಕುಪ್ಪಳ್ಳಿಯ ತಿರುವು

ಪ್ರಪಂಚದ ಹದಿನೆಂಟು ಜೀವ ವೈವಿದ್ಯದ ತಾಣದಲ್ಲಿ ಒಂದಾದ ಸ್ಥಳ ಸಹ್ಯಾದ್ರಿ ಬೆಟ್ಟ, ಅದರ ತಪ್ಪಲಲ್ಲೆ ಇರುವುದು ಕುವೆಂಪುರವರ ಬಾಲ್ಯ ಕಳೆದ ಮನೆ, ಈಗ “ಕವಿಮನೆ” ಯಾಗಿದೆ.  ಇನ್ನೂರು ವರ್ಷ ಹಳೆಯದಾದ ಮನೆಯು, ಮಲೆನಾಡಿನ ಒಬ್ಬ ಜಮೀನ್ದಾರನ ಮನೆಯ ತರಹ ಇದೆ.  ಮಲೆನಾಡಿನ ಸೌಂದರ್ಯವನ್ನು ತನ್ನ ಒಡಲಲ್ಲೆ ಇನ್ನೂರು ವರ್ಷ ಇಟ್ಟುಕೊಂಡಿದ್ದ ಈ ಮನೆಯು ಎಂತವರನ್ನು ಏನನ್ನು ಮಾತನಾಡಿಸದೆ ತನ್ನ ಕಡೆಗೆ ದಿಟ್ಟಿಸುವಂತೆ ಮಾಡುತ್ತದೆ.  ಇಂತಹ ಮನೆಯಲ್ಲಿ ಬೆಳೆದ ಬಾಲ್ಯ ಕುವೆಂಪು ತನ್ನ ಮನೆಯ ಬಗ್ಗೆ ಅವರೇ ಬರೆದಿರುವ ಕಾವ್ಯ, ಅವರ ಈ ಮನೆಯ ಒಡನಾಟ ಎಷ್ಟಿತ್ತೆಂಬುದನ್ನು ಕಣ್ಣಮುಂದೆ ತರಿಸುತ್ತದೆ.

IMG_0029
ತನ್ನ ಮನೆಯ ಬಗ್ಗೆ ಬರೆದಿರುವ ಕವಿತೆ

ರಾಷ್ಟ್ರಕವಿ ಕುವೆಂಪು ಪ್ರತಿಷ್ಟಾನವು ಈ ಮನೆಯನ್ನು, ಅದರ ಮೂಲ ವಿನ್ಯಾಸಕ್ಕೆ ಹಾಳಾಗದಂತೆ ನವೀಕರಿಸಿ, ಒಂದು ವಸ್ತು ಸಂಗ್ರಹಾಲಯವಾಗಿ ಮಾರ್ಪಾಡಿಸಿದೆ.  ಮನೆಯ ಒಳಗೆ ಕುವೆಂಪುರವರು ಕುಪ್ಪಳಿ ಮತ್ತು ಮೈಸೂರಿನಲ್ಲಿ ಇದ್ದಾಗ ಬಳಸುತ್ತಿದ್ದ ವಸ್ತುಗಳು, ಆಗಿನ ಕಾಲದಲ್ಲಿ ಮಲೆನಾಡಿನಲ್ಲಿ ಬಳಸುತ್ತಿದ್ದ ದೊಡ್ಡ ಗಾತ್ರದ ಅಡಿಗೆ ಮನೆಯ ವಸ್ತುಗಳು, ಅವರ ಸಾಹಿತ್ಯ ಭಂಡಾರ, ಅವರ ಪ್ರಶಸ್ತಿಗಳು ಎಲ್ಲವನ್ನೂ ಅಚ್ಚುಕಟ್ಟಾಗಿ ಪ್ರದರ್ಶಿಸಲಾಗಿದೆ.  ಕುವೆಂಪುರವರ ವಿವಾಹದ ಮುದ್ರಿತ ಪತ್ರ ಮತ್ತು ವಿವಾಹ ಮಂಟಪ ಗಮನ ಸೆಳೆಯುವಂತ ವಸ್ತುಗಳಾಗಿವೆ.  ಕುವೆಂಪುರವರ ಕೆಲವು ಕಾದಂಬರಿಗಳ ಮೊದಲ ಮುದ್ರಿತ ಪ್ರತಿಗಳನ್ನು ಪ್ರದರ್ಶಿಸಲಾಗಿದೆ.  ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ “ಶ್ರೀ ರಾಮಾಯಣದರ್ಶನಂ” ಮಹಾಕಾವ್ಯದ ಮೊದಲ ಹಸ್ತಪ್ರತಿ ಇದರಲ್ಲಿ ಪ್ರಮುಖವಾದದ್ದು.  ಕರ್ನಾಟಕ ರತ್ನ, ಪದ್ಮ ವಿಭೂಷಣ, ಜ್ಞಾನಪೀಠ ಪ್ರಶಸ್ತಿ ಪತ್ರಗಳು, ಫಲಕಗಳನ್ನು ಮೊದಲ ಬಾರಿ ಕಂಡ ನನಗೆ, ಒಂದು ಅದ್ಬುತ ಸಾಹಿತ್ಯ ಲೋಕದ ಬಹುದೊಡ್ಡ ಖಜಾನೆಯನ್ನು ಕಂಡ ಉತ್ಸಾಹ ಮೂಡಿತ್ತು.  ಈ ಪ್ರಶಸ್ತಿಗಳಿಗೆ ಕಾರಣವಾಗಿದ್ದ ಕುವೆಂಪುರವರ ಮಹಾಕಾವ್ಯಗಳು, ಅವರಿಗೆ ಕನ್ನಡ ಭಾಷೆಯ ಮೇಲಿದ್ದ ಪ್ರೀತಿ ಎಲ್ಲವೂ ಕಣ್ಣಮುಂದೆ ಬಂದು ಹೊದಂತಾಯಿತು.

IMG_0027
“ಕವಿಮನೆಯ” ವಿಹಂಗಮ ನೋಟ
IMG_0133
ಕವಿಮನೆ
IMG_0129
ಕವಿಶೈಲ ಕಾಲುದಾರಿಯಿಂದ ಕವಿಮನೆ ನೋಟ
IMG_0032
ಕವಿಮನೆಯ ಮುಂದಿನ ಉದ್ಯಾನ

ಮನೆಯಲ್ಲಿದ್ದ ಕುವೆಂಪುರವರ ಅಧ್ಯಯನ ಕೊಠಡಿ, ಅಜ್ಜಯನ ಬಚ್ಚಲು ಮನೆ, ಅವರ ಮೇಜು, ಶಾಲು, ಬಟ್ಟೆ, ಪೆನ್ನು, ಅವರಿಗೆ ಸಂದ ಡಾಕ್ಟರೇಟ್ ಪದವಿಗಳು ಎಲ್ಲವನ್ನೂ ಒಂದಿಂಚು ಬಿಡದೆ ನೋಡಿದೆ.  ತೇಜಸ್ವಿಯವರ ಸಂಗ್ರಹದಲ್ಲಿದ್ದ ಕುವೆಂಪುರವರ ಬಾಲ್ಯದ ಫೋಟೋಗಳು, ಅವರ ಫ್ಯಾಮಿಲಿ ಫೋಟೋ, ಬೇಂದ್ರೆ ಜೊತೆಗಿದ್ದ ಫೋಟೋ, ಎಲ್ಲವನ್ನೂ ಪ್ರದರ್ಶಿಸಲಾಗಿತ್ತು.  ಈ ಕವಿಮನೆಯ ವಸ್ತುಸಂಗ್ರಹಾಲಯದಲ್ಲಿದ್ದ ಎಲ್ಲ ವಸ್ತುಗಳಬಗ್ಗೆ, ಅದರ ಇತಿಹಾಸ ಮತ್ತು ಶ್ರೇಷ್ಠತೆಯ ಬಗ್ಗೆ ನಮ್ಮ ಗಮನ ಸೆಳೆದವರು ಅಲ್ಲಿ ಕೆಲಸ ಮಾಡುತ್ತಿರುವ ಪಲ್ಲವಿ ಎಂಬುವರು.  ನಮಗೆ ತಿಳಿಯದೆ ಇರುವ ಎಷ್ಟೋ ವಿಚಾರಗಳನ್ನು ಅವರು ನಮಗೆ ತಿಳಿಸಿಕೊಟ್ಟರು.  ಸಾಹಿತ್ಯದಲ್ಲಿ ಆಸಕ್ತಿ ಇರುವವರು, ಒಂದು ಬಾರಿ ಕವಿಮನೆಯನ್ನು ಸುತ್ತು ಹಾಕಿದರೆ, ಅವರ ಸಾಹಿತ್ಯದ ಅಭಿರುಚಿಯು ಇನ್ನಷ್ಟು ಹೆಚ್ಚಾಗುವುದರಲ್ಲಿ ಅನುಮಾನವೇ ಇಲ್ಲ.  ಅಂತಹ ಸ್ಪೂರ್ತಿ ನೀಡುವ ಮನೆ ಈ “ಕವಿಮನೆ”.

ಮನೆಯಿಂದ ಹೊರಗೆ ಬಂದ ಕೂಡಲೇ ಪಕ್ಕದಲ್ಲಿ ಕವಿಶೈಲಗೆ ಕಾಲುದಾರಿ ಇದೆ.  ಕವಿಶೈಲ ಕುವೆಂಪು ಮನೆಗೆ ಹೊಂದಿಕೊಂಡಂತೆ ಇರುವ ಒಂದು ಭವ್ಯವಾದ, ಪರಿಸರದ ತಾಣ.  ಮಳೆಯನ್ನು ತನ್ನ ಉಸಿರಾಗಿಸಿಕೊಂಡ ಮಲೆನಾಡಿನ ಈ ತಾಣ ನಿತ್ಯವೂ ಹಚ್ಚ ಹಸಿರಿನಿಂದ ಕೂಡಿ ಕಂಗೊಳಿಸುತ್ತಿದೆ.

IMG_0045

ಕಾಲುದಾರಿಯಲ್ಲಿ ಕಲ್ಲು ಹಾಸಿನ ಮೇಲೆ ಹತ್ತು ನಿಮಿಷ ನೆಡೆದರೆ ಕವಿಶೈಲದ  ತುದಿ ಮುಟ್ಟಬಹುದು.  ಹತ್ತುಬಂದ ನಮಗೆ ಎದುರುಗೊಂಡಿದ್ದು, ಒಂದು ಸುಂದರವಾದ ಕಲ್ಲುಗಳ ಸ್ಮಾರಕ.  ಇದು ಕುವೆಂಪುರವರು ಅಗಲಿದ ನಂತರ ಕಲಾವಿದನ ಕಲ್ಪನೆಯಲ್ಲಿ ಮೂಡಿದ ಬೃಹತ್ ಶಿಲಾ ಶಿಲ್ಪಗಳು.  ಎಂತವರನ್ನು ಮಂತ್ರಮಗ್ನರಾಗಿಸುವ ಈ ಶಿಲಾ ಶಿಲ್ಪಗಳು ಕವಿಶೈಲದ  ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.

IMG_0069_70_71_tonemapped
ಕವಿಶೈಲದ ಶಿಲಾ ಶಿಲ್ಪಗಳು
IMG_0097_8_9_tonemapped
ಕವಿಶೈಲದ ಶಿಲಾ ಶಿಲ್ಪಗಳು

ಕುವೆಂಪುರವರ ಮಹಾ ಕಾದಂಬರಿಗಳಾದ ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿಯಲ್ಲಿ ಬರುವ ಕಾಡು, ಮೇಡು, ಬೆಟ್ಟ ಗುಡ್ಡ, ದಟ್ಟ ಅರಣ್ಯ, ಇವಲ್ಲವನ್ನು ಅತ್ಯಂತ ಮನೋಜ್ಞವಾಗೆ ಚಿತ್ರಿಸಿರುವುದಕ್ಕೆ ಸ್ಪೂರ್ತಿಯಾದ ತಾಣವೆ ಕವಿಶೈಲ.  ಹದಿನೈದು ವರ್ಷ ಬಾಲ್ಯವನ್ನು ಇಲ್ಲೇ ಕಳೆದಿದ್ದ ಕುವೆಂಪು, ಅವರ ಜೀವನದಲ್ಲಿ ಮತ್ತೆ ಮತ್ತೆ ಭೇಟಿ ಕೊಟ್ಟ ತಾಣ ಕವಿಶೈಲ ಆಗಿತ್ತು.  ಅಷ್ಟು ಆಳವಾಗಿ ಕುವೆಂಪು ಈ ತಾಣವನ್ನು ಪ್ರೀತಿಸಿದ್ದರು.  ಕವಿಶೈಲದ ತುದಿಯನ್ನು ಮುಟ್ಟುತ್ತಿದ್ದಂತೆ, ಮಿತ್ರರಿರೇ ಮಾತಿಲ್ಲಿ ಮೈಲಿಗೆ! ಸುಮ್ಮನಿರಿ ಮೌನವೆ ಮಹತ್ತಿಲ್ಲಿ, ಈ ಬೈಗುಹೊತ್ತಿನಲಿ… ಎಂದು ಬರೆದ ಕಲ್ಲು ನಮಗೆ ಎದುರುಗೊಂಡಿತ್ತು.

IMG_0079

ಈ ಜಾಗವನ್ನು ಕಂಡ ಯಾರಿಗಾದರೂ ಇಲ್ಲಿ ಮಾತಿಗಿಂತ ಮೌನವೆ ಶ್ರೇಷ್ಠ ಎಂದೆನಿಸುವುದರಲ್ಲಿ ಸಂದೇಹವೆ ಇಲ್ಲ.  ಅಲ್ಲಿರುವ ನಿಶಬ್ಧತೆ ಎಷ್ಟಿತ್ತೆಂದರೆ, ಮರದ ಒಂದೆ ಒಂದು ಎಲೆ ಅಲ್ಲಾಡಿದರು ಸಹ ಅದರ ಶಬ್ದ ಕೇಳಿಸುವಷ್ಟಿತ್ತು.  ನಿತ್ಯಹರಿದ್ವರ್ಣದ ಕಾಡು, ಸಹ್ಯಾದ್ರಿ ಬೆಟ್ಟಗಳ ನೋಟ ಮಲೆನಾಡಿನ ನಿಜವಾದ ಚಿತ್ರಣವನ್ನು ಪ್ರತಿಬಿಂಭಿಸುತ್ತಿತ್ತು.  ಕುವೆಂಪು ಅವರೊಬ್ಬರೆ ಅಲ್ಲದೆ ಅವರ ಆಪ್ತ ಸ್ನೇಹಿತರು ಕೂಡ ಬಂದು ಬೆಟಿಯಾಗುತ್ತಿದ್ದ ಜಾಗ ಈ ಕವಿಶೈಲ.  ಹಾಗೆ ಬಂದಾಗ ಬಿ ಎಂ ಶ್ರೀಕಂಠಯ್ಯ, ಟಿ ಎಸ್ ವೆಂಕಟರಾಯರು ಮತ್ತು ಕುವೆಂಪು ಕವಿಶೈಲದ ಬಂಡೆಯ ಮೇಲೆ ತಮ್ಮ ಹಸ್ತಾಕ್ಷರಗಳನ್ನು ಉಳಿಸಿ ಹೋಗಿದ್ದಾರೆ.  ಇದನ್ನು ನೋಡುವುದೇ ಒಂದು ರೋಮಾಂಚನ.

IMG_0111

ಇಷ್ಟು ಅದ್ಬುತವಾದ ಕವಿಶೈಲದ ವರ್ಣನೆಯನ್ನು ಕವಿ ವಾಣಿಯಲ್ಲೇ ಕೇಳಬೇಕಾದರೆ, ಇಲ್ಲಿದೆ ನೋಡಿ…

IMG_0103

“ನೀಂ ಭುವನದಲಿ ಸ್ವರ್ಗವಾಗಿಹೆ…” ಎಂಬ ಸಾಲುಗಳು ಇಲ್ಲಿಗೆ ಬರುವ ಪ್ರತಿಯೊಬ್ಬ ಪರಿಸರ ಪ್ರೇಮಿಗು ಅನ್ವಹಿಸುವುದರಲ್ಲಿ ಎರಡು ಮಾತಿಲ್ಲ.  ಕವೆಂಪುರವರನ್ನು ಜೀವನದುದ್ದಕ್ಕೂ ಪ್ರೇರೇಪಿಸಿದ ಕವಿಶೈಲದಲ್ಲಿಯೇ ಅವರ ಬಾಹ್ಯ ಶರೀರವನ್ನು ಲೀನ ಮಾಡಲಾಗಿದೆ.  ಅವರ ಅಂತ್ಯ ಸಂಸ್ಕಾರ ನೆಡೆದದ್ದು ಈ ಹಾಸುಹೊದ್ದ ಕವಿಶೈಲದ ಬಂಡೆಯಲ್ಲಿ.  ತನಗೆ ಅತ್ಯಂತ ಪ್ರಿಯವಾದ ಕವಿಶೈಲದಲ್ಲಿಯೇ ಚಿರನಿದ್ರೆ ಮಾಡುತ್ತಿರುವ ಕುವೆಂಪು, ಇಂದಿಗೂ ತನ್ನ ವಿಶ್ವ ಮಾನವನ ಸಂದೇಶ, ಸಾಹಿತ್ಯದ ಅಭಿರುಚಿ, ಪ್ರಕೃತಿಯ ವೈಭವವನ್ನು ಇಲ್ಲಿಗೆ ಬೇಟಿ ಕೊಟ್ಟವರಿಗೆ ಉಣಬಡಿಸುತ್ತಲೇ ಇದ್ದಾರೆ.

IMG_0085

IMG_0100_1_2_tonemapped
ಕವಿಸಮಾಧಿ ಮತ್ತು ಶಿಲಾ ಶಿಲ್ಪಗಳು
IMG_0112
ಕವಿಶೈಲದಿಂದ ಸಹ್ಯಾದ್ರಿ ಬೆಟ್ಟಗಳ ವಿಹಂಗಮ ನೋಟ

ನಾನು ನನ್ನ ಸ್ನೇಹಿತ ಕಿರಣ್ ಕವಿಶೈಲ ಬೆಟ್ಟದ ಮೇಲೆ ಹೋದಾಗ, ಅಲ್ಲಿ ಯಾರು ಇರಲಿಲ್ಲ. ಜೋರಾದ ಮಳೆ, ನಿಶಬ್ಧತೆ ಮಳೆಯ ಶಬ್ದ, ಕವಿಸಮಾಧಿ, ಬೃಹತ್ ಶಿಲಾ ಶಿಲ್ಪಗಳು, ಸಹ್ಯಾದ್ರಿ ಬೆಟ್ಟದ ಸಾಲು ಎಲ್ಲವೂ ಕವಿಶೈಲದ ಭವ್ಯ ಸೌಂದರ್ಯವನ್ನು ಅಷ್ಟೇ ನಿಶಬ್ದತೆಯಿಂದ ಪ್ರದರ್ಶಿಸುತ್ತಿದ್ದವು.  ಮೌನದಿಂದಲೇ ಅಲ್ಲಿ ಕಳೆದ ಸಮಯವನ್ನು ಪದಗಳಿಂದ ವರ್ಣಿಸಲು ನನಗೆ ಆಸಾದ್ಯ.  ಹೆಚ್ಚು ಹೊತ್ತು ಸಮಯ ಕಳೆದ ನಮಗೆ, ಸಮಯ ಹೊರಳಿದ್ದೆ ಗೊತ್ತಾಗಲಿಲ್ಲ.  ಮನಸಿಲ್ಲದ ಮನಸ್ಸಿನಲ್ಲಿ ಕೆಳಗೆ ಇಳಿದು ಬರಬೇಕಾಯಿತು.

ಕುವೆಂಪುರವರ ಜನ್ಮ ಶತಮಾನೋತ್ಸವದ ನೆನಪಿಗಾಗಿ ಮತ್ತೊಂದು ಸ್ಮಾರಕ, ಮಲೆನಾಡಿನ ಮನೆಯ ಶೈಲಿಯಲ್ಲಿ ನಿರ್ಮಾಣವಾಗಿರುವುದು ಇಲ್ಲಿಯ ಮತ್ತೊಂದು ವಿಶೇಷ.  ಬಯಲುರಂಗ ಮಂದಿರವನ್ನು ಒಳಗೊಂಡ ಈ ಸ್ಮಾರಕ, ಸಾಹಿತ್ಯ ಸಾಂಸ್ಕೃತಿಕ ಪ್ರದರ್ಶನಗಳನ್ನು ನೆಡೆಸಲು ಹೇಳಿಮಾಡಿಸಿದ ಜಾಗವಾಗಿದೆ.  ಪ್ರವಾಸಿಗರು ತಂಗುವುದಕ್ಕೆ ಕೆಲವು ಕೊಠಡಿಗಳನ್ನು ನಿರ್ಮಾಣ ಮಾಡಿ, ಸಕಲ ಸೌಲಭ್ಯಗಳನ್ನು ಈ ಸ್ಮಾರಕದಲ್ಲಿ ಒದಗಿಸಲಾಗಿದೆ.

IMG_0003
ಶತಮಾನೋತ್ಸವದ ಕಟ್ಟಡ
IMG_0137
ಕಲಾನಿಕೇತನ
IMG_0140
ಕಾನೂರು ಹೆಗ್ಗಡತಿಯಲ್ಲಿ ಬರುವ ಹೆಗ್ಗಡತಿಯ ಪುತ್ಹಳಿ

ಇದರ ಪಕ್ಕದಲ್ಲೇ “ಕಲಾನಿಕೇತನ” ಎಂಬ ಮತ್ತೊಂದು ಕಟ್ಟಡವನ್ನು ನಿರ್ಮಾಣಮಾಡಲಾಗಿದೆ.  ಕುವೆಂಪು ಬರೆದ “ಮಲೆಗಳಲ್ಲಿ ಮದುಮಗಳು” ಕಾದಂಬರಿ ಓದಿದ್ದ ನನಗೆ, ಅದರಲ್ಲಿ ಬರುವ ಗುತ್ತಿ ಮತ್ತು ಹುಲಿಯ (ನಾಯಿ) ಅತ್ಯಂತ ಇಷ್ಟವಾದ ಪಾತ್ರ.  ಕುಪ್ಪಳಿಗೆ ಬರುವ ಮೊದಲೇ “ಕಲಾನಿಕೇತನ” ದ ಮುಂದೆ ಸೃಷ್ಟಿಸಿರುವ ಗುತ್ತಿ ಮತ್ತು ಹುಲಿಯನ ಪುತ್ಹಳಿಯ ಬಗ್ಗೆ ತಿಳಿದಿದ್ದೆ.  ಅದರ ಜೊತೆ ನನ್ನದೊಂದು ಫೋಟೋ ಬೇಕೆ ಬೇಕು ಅಂತ ನನ್ನ ಸ್ನೇಹಿತ ಕಿರಣ್ ಗೆ ಹಟ ಹಿಡಿದಿದ್ದೆ.  ಆ ಪುತ್ಹಳಿಯ ಮುಂದೆ ಬಂದು ನಿಂತಾಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ.  ಜೋರಾಗಿ ಮಳೆ ಬೀಳುತ್ತಿದ್ದರು ಅದನ್ನು ಲೆಕ್ಕಿಸದೆ ಫೋಟೋ ತೆಗೆಸಿಕೊಂಡೆ.  ಹಾಗೆಯೆ ಕಿರಣ್ ದು ಒಂದು ಫೋಟೋ ತೆಗೆದೆ.  ಅದೇ ಈ ಕೆಳಗಿರೋ ಎರಡು ಫೋಟೋ, “ಗುತ್ತಿನಾಯಿ ಮತ್ತು ನಾಯಿಗುತ್ತಿ” ಯ ಜೊತೆ! ಇದರ ಜೊತೆಗೆ ಕಾನೂರು ಹೆಗ್ಗಡತಿಯಲ್ಲಿ ಬರುವ ಹೆಗ್ಗಡತಿಯ ಪುತ್ಹಳಿಯು ಇದೆ.

IMG_0160
ಗುತ್ತಿ, ಹುಲಿಯ ಮತ್ತು ನಾನು
IMG_0153
ಗುತ್ತಿ, ಹುಲಿಯ ಮತ್ತು ಕಿರಣ್

“ಕಲಾನಿಕೇತನ”ದ ಒಳಗೆ ತೇಜಸ್ವಿರವರ ಮಲೆನಾಡಿನ ಪಕ್ಷಿಗಳ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿದೆ.  ನವಿಲುಕಲ್ಲಿನ ಸೂರ್ಯ ಉದಯಿಸುವ ಚಿತ್ರ, ಕುವೆಂಪುರವರಿಗೆ “ದೇವರು ರುಜು ಮಾಡಿದನು” ಪದ್ಯಕ್ಕೆ ಸ್ಪೂರ್ತಿ ನೀಡಿದ ತುಂಗಾ ನದಿಯ ತೀರ, ಮಹಾಕಾವ್ಯಗಳಲ್ಲಿ ಶೃಷ್ಟಿಸಿರುವ ಕೆಲವು ಪಾತ್ರಗಳ ಚಿತ್ರಕಲೆಗಳು ಮನತಣಿಸುವಂತಿತ್ತು.

ಇದೆಲ್ಲವನ್ನು ನೋಡಿ ಆಸ್ವಾದಿಸಿ ಹೊರಗೆ ಬಂದ ನಮಗೆ ಮತ್ತೊಂದು ಪವಿತ್ರ ಸ್ಥಳ ಎದುರಾಗಿತ್ತು.  ಅದೇ ಕೆ ಪಿ ಪೂರ್ಣಚಂದ್ರ ತೇಜಸ್ವಿ ರವರ ಸ್ಮಾರಕ.  ತೇಜಸ್ವಿಯವರ ಬಾಹ್ಯ ಶರೀರವನ್ನು ಅವರ ತಂದೆಯೇ ಹೇಳುವಂತೆ ಸ್ವರ್ಗದಂತಿದ್ದ ಕವಿಶೈಲದಲ್ಲಿಯೇ ಲೀನಮಾಡಲಾಗಿತ್ತು.  ಬೃಹತ್ ಶಿಲಾ ಶಿಲ್ಪಾದ ಸ್ಮಾರಕ, ಪ್ರಕೃತಿಯ ಮಗದೊಂದು ಬಾಗವಾಗಿ, ಪವಿತ್ರ ಸ್ಥಳವಾಗಿ ಕಂಗೊಳಿಸುತಿತ್ತು.

IMG_9998
ತೇಜಸ್ವಿಯ ಸ್ಮಾರಕ

ನಾವು ಕುಪ್ಪಳಿಗೆ ತೆರೆಳಿದ್ದು ಸ್ವಂತ ವಾಹನದಲ್ಲಿ ಅಲ್ಲ.  ಬದಲಾಗಿ ಸ್ಥಳೀಯ ಬಸ್ಸುಗಳಿಂದ.  ಆ ಬಸ್ಸುಗಳೆಲ್ಲ ಕುಪ್ಪಳಿಯ ಒಳಗೆ ಬರದೇ, ತಿರುವಿನಲ್ಲೇ ನಿಲ್ಲಿಸಿ ಹೋಗುತ್ತಿದ್ದವು.  ಅಲ್ಲಿಂದ ಕುಪ್ಪಳಿಗೆ ಎರಡು ಕಿಲೋಮೀಟರ್ ನೆಡೆಯಬೇಕಾಗಿತ್ತು.  ಹಾಗೆ ನೆಡೆದು ಬರುವಾಗಲೇ ಕುಪ್ಪಳಿಯು ತನ್ನ ಭವ್ಯ ಸೌಂದರ್ಯವನ್ನು ನಮಗೆ ಉಣಬಡಿಸಿತ್ತು.

IMG_0013
ಕುಪ್ಪಳ್ಳಿಗೆ ದಾರಿ
IMG_9994
ಕವಿಶೈಲಕ್ಕೆ ದಾರಿ (ರಸ್ತೆ ಯಲ್ಲೂ ಹೋಗಬಹುದು)

IMG_0015

IMG_9980ಪಕ್ಕದಲ್ಲಿ ಕಾಣುವ ಚಿಕ್ಕ ಚಿಕ್ಕ ಕಾಲುವೆ, ನೀರಿನ ಜರಿಗಳು, ಜೋರಾದ ಮಳೆ, ಇದರ ಸೌಂಧರ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು.  ಸ್ವಂತ ವಾಹನದಲ್ಲಿ ಬಂದಿದ್ದರೆ ಈ ಅನುಭವ ಸಿಗುತ್ತಿರಲಿಲ್ಲ ಎಂಬುದು ನನ್ನ ಅನಿಸಿಕೆ.  ವಿಶ್ವಮಾನವ ಸಂದೇಶ ಸಾರಿದ್ದ ಈ ದೇಶದ ಮಹಾನ್ ಕವಿಯ ಅಂಗಳಕ್ಕೆ ಬೇಟಿ ನೀಡಿದ್ದ ನನಗೆ, ಪ್ರಕೃತಿಯ ಸೌಂಧರ್ಯ, ಇದರಿಂದ ಸ್ಪೂರ್ತಿಗೊಂಡು ರಚಿಸಿದ್ದ ಸಾಹಿತ್ಯಗಳನ್ನು ಕಂಡು, ಯಾವತ್ತೂ ಅನುಭವಿಸದ ಲೋಕಕ್ಕೆ ಹೋಗಿದ್ದಂತು ನಿಜ.  ದಾರಿಯಲ್ಲಿ ಬರುವಾಗಲೇ ಕುಪ್ಪಳಿಯ ಸೌಂಧರ್ಯವನ್ನು ಕಂಡು ಮಾತುಗಳೇ ಹೊರಡದೆ, ನಮಗೆ ಗೊತ್ತಿಲ್ಲದೆ ಮೌನಕ್ಕೆ ಶರಣಾಗಿದ್ದೆವು.  ಮಾತಿಲ್ಲಿ ಮೈಲಿಗೆ! ಸುಮ್ಮನಿರಿ ಮೌನವೆ ಮಹತ್ತಿಲ್ಲಿ, ಈ ಬೈಗುಹೊತ್ತಿನಲಿ ಎಂಬ ಕುವೆಂಪುರವರ ಮಾತು ಅಕ್ಷರ ಸಹ ಇಲ್ಲಿ ಸತ್ಯ.  ನನ್ನ ಬಹುದಿನಗಳ ಕನಸು ನನಸಾಗಿತ್ತು, ಮತ್ತೊಮ್ಮೆ ಬಂದು ಒಂದೆರಡು ದಿನ  ತಂಗಬೇಕೆಂದು, ನನಗೆ ಗೊತ್ತಿಲ್ಲದೆ ನನ್ನ ಮನಸ್ಸಿನಲ್ಲಿ ಇನ್ನೊಂದು ಕನಸು ಚಿಗುರಿತ್ತು.

ಬೆಂಗಳೂರಿನಿಂದ ಪ್ರತಿದಿನವು KSRTC ಸುವಿಹಾರಿ (Sleeper Coach) ಬಸ್ಸು ರಾತ್ರಿ 10:30 ಕ್ಕೆ ಕುಪ್ಪಳಿಗೆ ಸಂಚರಿಸಲಿದೆ. ಕುಪ್ಪಳಿಯಿಂದ ಪ್ರತಿದಿನ ಮತ್ತೊಂದು ಬಸ್ಸು ರಾತ್ರಿ 08:30 ಕ್ಕೆ ಬೆಂಗಳೂರಿಗೆ ಸಂಚರಿಸಲಿದೆ.  ಯವಾಗಲಾದರೂ ಸಮಯ ಮಾಡಿಕೊಂಡು ಈ ದಾರ್ಶನಿಕ ಕವಿಯ ಅಂಗಳಕ್ಕೆ ಒಮ್ಮೆ ಹೋಗಿಬನ್ನಿ.

IMG_9964

 —–
-ವಿಶ್ವ ಕೀರ್ತಿ ಎಸ್
27/08/2013.

ಅಬ್ದುಲ್ ಕಲಾಂ ಮತ್ತು ನಾನು!

ಬೆಳಗ್ಗೆ ಹಾಸಿಗೆ ಇಂದ ಎದ್ದಿ ಗಂಟೆ ನೋಡ್ತೀನಿ ಏಳುವರೆ ಆಗಿತ್ತು.  ಎದ್ದಿ ಮುಖ ತೊಳ್ಕೊಂಡಿ, ಅಂಗಡಿಗೆ ಹೋಗಿ ನ್ಯೂಸ್ ಪೇಪರ್ ತಗೊಂಡ್ಬಂದೆ.  ಪೇಪರ್ ಓದಕ್ಕೆ ಕುತ್ಕೊಂಡೆ, ದಿನ 3 ಡಿಸೆಂಬರ್ 2012,  ಸೋಮವಾರ ಆಗಿತ್ತು.  ಪೇಪರ್ ಓದುತ್ತಾ ಇದ್ದಾಗ, “ಅಬ್ದುಲ್ ಕಲಾಂ ಇಂದು ನಗರಕ್ಕೆ” ಅಂತ ಒಂದು ನ್ಯೂಸ್ ಇತ್ತು.  ಕಲಾಂ ಇಂದು IISc ಗೆ ಬರ್ತಾ ಇದ್ದಾರೆ ಅಂತ ಆ ನ್ಯೂಸ್ ಅಲ್ಲಿ ಇತ್ತು. ನನ್ನ MSc ಡಿಗ್ರಿ ಮುಗಿಸಿ ಮೂರು ತಿಂಗಳಾಗಿತ್ತು. ಅಂತ ಹೆಳ್ಕೋಳೋ ರೀತಿ ಏನು ಕೆಲ್ಸ ಮಾಡ್ತಿರ್ಲಿಲ್ಲ.  ಮನೆಲೇ ಕಾಲ ಕಳಿತಾ ಇದ್ದ ಸಮಯ.  ದಿನವೆಲ್ಲ ಬಿಡುವಾಗೆ ಇದ್ದೇ.  ಇವತ್ತು ಆದರೆ IISc ಗೆ ಹೋಗಿ ಅಬ್ದುಲ್ ಕಲಾಂನ ನೋಡ್ಲೇಬೇಕು ಅನ್ನುಸ್ತು.  ಹೇಗೆ ಹೋಗೋದು ಅಂತ ಯೋಚ್ನೆ ಮಾಡ್ತಾಇದ್ದೆ.  ತಕ್ಷ್ಣ ನನ್ ಮೊಬೈಲ್ ರಿಂಗ್ ಆಗಿತ್ತು ಕೇಳುಸ್ತು.  ನನ್ ಫ್ರೆಂಡ್ ಚಂದ್ರಶೇಖರ ಕಾಲ್ ಮಾಡ್ತಾಇದ್ದ.  ಕಾಲ್ ಎತ್ತಿ ಹಲೋ ಚಂದ್ರಶೇಖರ್ ಗುಡ್ ಮಾರ್ನಿಂಗ್ ಹೇಗಿದ್ಯ ಅಂತ ಕೆಳ್ದೆ?  ನಾನು ಅವ್ನು ಹಾಗೆ ಸ್ವಲ್ಪ ಹೊತ್ತು ಮಾತಾಡ್ದೊ.  ಅದೆಲ್ಲ ಅದ್ಮೇಲೆ ಕಾಲ್ ಮಾಡಿತ್ ವಿಚಾರಕ್ಕೆ ಬಂದ.  ಇವತ್ತು ನಾನು ಓದಿತ್ ಸ್ಕೂಲ್ಗೆ “ಅಬ್ದುಲ್ ಕಲಾಂ” ಅವ್ರು ಬರ್ತಾ ಇದ್ದಾರೆ, ನೀನೇನಾದ್ರೂ ಫ್ರೀ ಇದ್ರೆ ಬರ್ತೀಯಾ ಅಂದ.  ನನಗೆ ಫುಲ್ ಖುಷಿ!  ಇಗ್ತಾನೆ ಅಬ್ದುಲ್ ಕಲಾಂ IISc ಗೆ ಬರ್ತಾರೆ ಅಂತ ಪೇಪರ್ ಅಲ್ಲಿ ಕೊಟ್ಟಿದ್ರು, ಅಲ್ಲಿಗೆ ಹೋಗಣ ಅನ್ಕೋಂಡೆ, ಅಷ್ಟ್ರಲ್ಲಿ ನಿನ್ ಕಾಲ್ ಮಾಡಿ ನಮ್ ಸ್ಕೂಲ್ಗೆ ಬಾ ಅಂತಿದ್ಯ, ಆದ್ರೆ ಪೇಪರ್ ಅಲ್ಲಿ ಎಲ್ಲು ನಿಮ್ ಸ್ಕೂಲ್ಗೆ ಬರ್ತಾವ್ರೆ ಅಂತ ಕೊಟ್ಟಿಲ್ಲ ಅಂದೆ.  ಅದೆಲ್ಲ ನಂಗೊತ್ತಿಲ್ಲ,  ನಮ್ ಸ್ಕೂಲ್ಗೆ ಅಬ್ದುಲ್ ಕಲಾಂ ಬರ್ತಾವ್ರೆ ನೀನು ಬಾ ಅಂದ.  ಅಯ್ಯೋ ನಂಗೆ ಮಾಡಕ್ಕೆ ಏನು ಕೆಲ್ಸ ಇಲ್ಲ, ಖಂಡಿತ ಬರ್ತೀನಿ ಅಂತ ಹೇಳಿ ಕಾಲ್ ಕಟ್ ಮಾಡ್ದೆ.  ನನ್ ಫ್ರೆಂಡ್ಸ್ ನವೀನ, ಧನಂಜಯಗೂ ಕಾಲ್ ಮಾಡಿ ಹೆಳ್ದೆ.  ಅವ್ರು ಬರ್ತೀನಿ ಅಂದ್ರು.  ಇವತ್ತು ಅಬ್ದುಲ್ ಕಲಾಂ ನೋಡಕ್ಕೆ ಹೋಗ್ತಾಇದ್ದೀನಿ ಅಂತ ಮನೇಲಿ ಹೇಳಿ ನನ್ ಬ್ಯಾಗ್ ತೊಗೊಂಡಿ ಹೊರಟೆ.

ಮನೆ ಇಂದ 20 ನಿಮಿಷಕ್ಕೆ BMTCಲಿ ಸಿಟಿ ಮಾರ್ಕೆಟ್ಗೆ ಹೋದೆ.  ನವೀನ ಅಲ್ಲಿಗೆ ಬರ್ತೀನಿ ಅಂದ.  ಧನಂಜಯ ಡೈರೆಕ್ಟಾಗಿ ಸ್ಕೂಲ್ ಹತ್ರಾನೆ ಬರ್ತೀನಿ ಅಂದ.  ಚಂದ್ರಶೇಖರ ಫೋನ್ ಅಲ್ಲಿ, ಮಾರ್ಕೆಟ್ ಇಂದ ಡೈರೆಕ್ಟಾಗಿ ದೇವನಗುಂದಿ ಕ್ರಾಸ್ ಹತ್ರ ಬನ್ನಿ, ಅಲ್ಲಿಂದ ಸ್ಕೂಲ್ಗೆ ನಾನ್ ಕೊರ್ಕೋಂಡಿ ಹೋಗ್ತೀನಿ ಅಂದ.  ನವೀನ ಬಂದ್ ತಕ್ಷ್ಣ ಬಸ್ ಸಿಗ್ತು.  ಮಾರ್ಕೆಟ್ ಇಂದ ದೇವನಗುಂದಿ ಕ್ರಾಸ್ ಗೆ ಹೊರಟೋ,  ಬಸ್ ಓಂ ಫಾರಂ ದಾಟಿ ಚನ್ನಸಂದ್ರ ಅತ್ರ ಹೋಗ್ತಾ ಇದ್ದಾಗ, ಪಕ್ಕದಲ್ಲೆಲ್ಲಾ ದೊಡ್ಡ ದೊಡ್ಡ ಪ್ಲೆಕ್ಸ್ ಬ್ಯಾನರ್ ಕಾಣುಸ್ತು.  “ಅಬ್ದುಲ್ ಕಲಾಂ ಅವರಿಗೆ ಸುಸ್ವಾಗತ” ಅಂತ ಬರೆದಿತ್ತು.  ಅಲ್ಲಿಗೆ ಅಬ್ದುಲ್ ಕಲಾಂ ಬರ್ತಾ ಇದ್ದಾರೆ ಅನ್ನೋದು ಖಾತರಿ ಆಯ್ತು.  ಮಾರ್ಕೆಟ್ನಿಂದ ದೇವನಗುಂದಿ ಕ್ರಾಸ್ ಗೆ ಹೋಗಕ್ಕೆ BMTC ಬಸ್ ಒಂದೂವರೆ ಗಂಟೆ ತಗೊಂಡ.  ಅಂತೂ ಇಂತೂ ದೇವನಗುಂದಿ ಕ್ರಾಸ್ ಬಂತು, ಬಸ್ ಇಳಿತಾ ಇದ್ದಂಗೆ ಚಂದ್ರಶೇಖರ ಕಣ್ಣಿಗೆ ಬಿದ್ದ.  ಇಲ್ಲಿಂದ ಒಂದ್ ಆರ್ ಏಳ್ ಕಿಲೋಮೀಟ್ರು ಚಿಕ್ಕತಿರುಪತಿ ರೋಡಲ್ಲಿ ಹೋದ್ರೆ, ಕಲ್ಕುಂಟೆ ಅಂತ ಊರ್ ಬರುತ್ತೆ, ಅಲ್ಲಿ ನಮ್ ಸ್ಕೂಲ್ ಇದೆ ಅಂತ ಹೇಳ್ತಾ ಇದ್ದ, ಅಷ್ಟ್ರಲ್ಲಿ ಇನ್ನೊಂದ್ ಬಸ್ ಬಂತು ಹತ್ಕೊಂಡಿ ಹೊದೋ.  ಬಸ್ ಅಲ್ಲಿ ಒಬ್ಬ ಹುಡುಗನ ಹತ್ರ, ಅವತ್ ಆ ಸ್ಕೂಲಿನ ಪ್ರೊಗ್ರಾಮ್ ಇನ್ವಿಟೆಶನ್ ಸಿಕ್ತು.  ಆ ಶಾಲೆಯ 50 ನೇ ವರ್ಷದ ಸುವರ್ಣ ಸಮಾರಂಭಕ್ಕೆ ಅಬ್ದುಲ್ ಕಲಾಂ ರನ್ನು ಆಹ್ವಾನಿಸಲಾಗಿತ್ತು ಎಂದು ತಿಳೀತು.  ಚಂದ್ರಶೇಖರ ಅತ್ರ ನಾನು ನವೀನ ಆ ಸ್ಕೂಲ್ ಬಗ್ಗೆ ಇನ್ನೂ ವಿಚಾರುಸ್ತಿರುವಾಗ್ಲೆ, ಸ್ಕೂಲ್ ಬಂತು ಇಳಿರಿ ಅಂದ ಕಂಡೆಕ್ಟರ್.

IMG_7567
ಆ ಶಾಲೆಯ ಮುಖ್ಯ ದ್ವಾರ

ಆ ಶಾಲೆಯ ಹೆಸರು “ಶ್ರೀ ರಂಗನಾಥ ಗ್ರಾಮಾಂತರ ಪ್ರೌಡಶಾಲೆ”, ಕಲ್ಕುಂಟೆ ಅಲ್ಲಿ ಇತ್ತು.  ಬೆಂಗಳೂರಿನಲ್ಲಿರುವ ಒಂದು ಡಿಗ್ರಿ ಕಾಲೇಜಿಗೆ ಅದರ ಕಟ್ಟಡವನ್ನು ಹೋಲಿಸಬಹುದಾಗಿತ್ತು.  ತುಂಬಾ ವಿಶಾಲವಾಗಿತ್ತು.  ನಾವ್ ಬೆಂಗಳೂರಿನಲ್ಲಿ ಓದಿದ್ದ ಸ್ಕ್ಕುಲಲ್ಲಿ ಆಟ ಆಡಲು ಒಂದ್ ಗ್ರೌಂಡು ಇರ್ಲಿಲ್ಲ.  ಚಿಕ್ಕ ಚಿಕ್ಕ ಕ್ಲಾಸ್ ರೂಂಗಳು, ಆದ್ರಲ್ಲೆ ನೂರ್ ಜನನ ಕೂರುಸ್ತಿದ್ರು.  ಆದ್ರೆ ಈ ಶಾಲೆ ತುಂಬಾ ವಿಶಾಲವಾಗಿತ್ತು.  ಒಂದು ದೊಡ್ಡ ಮೈದಾನ, ವಿಶಾಲವಾದ ಕಟ್ಟಡ ಎಲ್ಲನೂ ನೋಡಿ ತುಂಬಾ ಖುಷಿ ಆಯ್ತು.  ನಾವು ಇತರ ಒಂದ್ ಸ್ಕೂಲ್ ಅಲ್ಲಿ ಓದಿರ್ಬೇಕಾಗಿತ್ತು ಅನ್ನುಸ್ತು.  ನಾವಂತು ಈ ಸ್ಕೂಲ್ ಅಲ್ಲಿ ಓದ್ಲಿಲ್ಲ, ನಮ್ಮ್ ಫ್ರೆಂಡ್ ಚಂದ್ರಶೇಖರ್ ನಾದ್ರೂ ಓದವ್ನಲ್ಲ ಅಂತ ಸಮಾದಾನ ಆಯ್ತು.  ಸ್ಕೂಲ್ ಒಳಗೆ ಕರಕೊಂಡೊಗಿ ಅವನ ಕ್ಲಾಸ್ ರೂಮ್ ಎಲ್ಲ ತೋರುಸ್ದ.  ಇಷ್ಟೆಲ್ಲ ಆಗೋಷ್ಟ್ರಲ್ಲಿ ಮಧ್ಯಾನ ಒಂದ್ ಗಂಟೆ ಆಗಿತ್ತು.  ನಂಗೂ ನವೀನುಂಗು ಊಟ್ಟೆ ಚೂರ್ ಅಂತಿತ್ತು.  ಚಂದ್ರಶೇಖರ್ ಗೆ ಊಟ ಎಲ್ಲ್ ಮಾಡೋದು ಅಂತ ಕೆಳ್ದೆ.  ಹೆ ಈ ಊರಲ್ಲಿ ತುಂಬಾ ಫೇಮಸ್ ರಂಗನಾಥ ಸ್ವಾಮಿ ಟೆಂಪಲ್ ಇದೆ, ಅಲ್ಲಿ ಫ್ರೀಯಾಗಿ ಊಟಾನು ಕೊಡ್ತಾರೆ ಬಾ ಹೋಗಣ ಅಂದ.  ಸೂಪ್ಪರ್, ಇನ್ಯಾಕೆ ಲೇಟ್ ಮಾಡೋದು ನಡೀ ಹೋಗಣ ಆಂದೋ.  ಆ ಊರಿನ ಮಧ್ಯದಲ್ಲಿ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ ಇತ್ತು.  ಅಲ್ಲಿಗೆ ಹೋಗ್ತಾ ಇದ್ದಂತೆ ಊಟಕ್ಕೆ ಬನ್ನಿ ಬನ್ನಿ ಅಂತ ಕರೀತಿದ್ರು.  ನಾವು ಹಿಂದು-ಮುಂದು ನೊಡ್ದಿರ ಒಳಗೆ ಹೋಗಿ ಕುತ್ಕೊಂಡೊ.  ಪುಳಿಹೊಗರೆ, ಸಿಹಿ ಪೊಂಗಲ್, ಕಾರ ಪೊಂಗಲ್ ಹೊಟ್ಟೆ ತುಂಬೊ ಅಷ್ಟು ಹಾಕುದ್ರು.  ಸೂಪ್ಪರಾಗಿತ್ತು, ಎಲ್ಲ ತಿಂದ್ ಅದ್ಮೇಲೆ ಚಂದ್ರಶೇಖರ್ ಹೆಳ್ದ, ಕಲ್ಕುಂಟೆ ತುಂಬಾ ಫೇಮಸ್ ಅಗಿರೋದು, ಪುಳಿಹೊಗರೆ ಮತ್ತೆ ಸಿಹಿ ಪೊಂಗಲ್ಗೆ, ಇದು ಇಲ್ಲೇ ಅಲ್ಲ ಫಾರಿನ್ಗೂ ಹೋಗಿದೆ ಅಂದ.  ಆದ್ರ ಟೇಸ್ಟ್ ನೋಡುದ್ರೆ, ಅವ್ನ್ ಹೇಳಿದ್ದು ನಿಜ ಅನ್ನುಸ್ತು, ಅಸ್ಟ್ ಟೇಸ್ಟ್ ಇರೋ ಪುಳಿಹೊಗರೆ, ಸಿಹಿ ಪೊಂಗಲ್ ನಾನಂತೂ ಎಲ್ಲೂ ತಿಂದಿರ್ಲಿಲ್ಲ!  ಊಟ ಎಲ್ಲ ಮಾಡಾದ್ಮೇಲೆ ದೇವಸ್ಥಾನದ ಒಳಗೆ ಹೊದೋ.  ತಮಿಳುನಾಡಿನ ಶ್ರೀರಂಗಂನಲ್ಲಿರುವ ರಂಗನಾಥಸ್ವಾಮಿ ವಿಗ್ರಹ ಹೇಗಿದ್ಯೋ, ಹಾಗೆ ಇಲ್ಲೂ ರಂಗನಥಸ್ವಾಮಿಯ ಮಲಗಿರುವ ವಿಗ್ರಹ ಇದೆ.  ಅದ್ಭುತವಾಗಿತ್ತು!  ಪಕ್ಕದಲ್ಲಿದ್ದ ನೋಟಿಸ್ ಬೋರ್ಡ್ ಅಲ್ಲಿ ಹೀಗೆ ಬರೆದಿತ್ತು.  “ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಈ ದೇವಸ್ಥಾನಕ್ಕೆ, ಇಂದು ಸಂಜೆ 3 ಗಂಟೆಗೆ ಬರುತ್ತಾರೆ”.  ಸ್ಕೂಲ್ ಅತ್ರ ಜನ ಮರುಳೋ ಜಾತ್ರೆ ಮರುಳೋ ಅಂತ ತುಂಬಾ ಜನ, ಜಾತ್ರೆ ತರ ಸೇರಿದ್ರು.  ಈ ಬೋರ್ಡ್ ನೋಡುದ್ಮೇಲೆ ನಾವ್ ಇಲ್ಲೇ ಇದ್ದು ಅಬ್ದುಲ್ ಕಲಾಂನ ನೋಡಣ ಆನ್ಕೊಂಡೊ.  ತಕ್ಷ್ಣ ಧನಂಜಯ್ ಗೆ ಫೋನ್ ಮಾಡಿ ಊರಿನ ಟೆಂಪಲ್ ಅತ್ರ ಬಾ ಆಂದೋ.  ಅವ್ನ್ ಇನ್ನೂ ಚನ್ನಸಂದ್ರ ಟ್ರಾಫಿಕ್ ಅತ್ರ ಸಿಕ್ಕಾಕೊಂಡಿದ್ದ.  ಟೈಮ್ ಎರಡ್ ಗಂಟೆ ಆಗಿತ್ತು.  ಇನ್ನೂ ಒಂದ್ಅವರ್ ಇತ್ತು.  ಆಗಿನ ಆ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಬಚ್ಚೇಗೌಡ್ರು ಬಂದ್ರು, ಪೋಲೀಸುನೋರು ಬಂದಿ ಎಲ್ಲ ಪರೀಕ್ಷೆ ಮಾಡುದ್ರು.  ನಾವ್ ದೇವಸ್ಥಾನದ ಒಳಗೆ ಇರೋಣ ಆನ್ಕೊಂಡೊ, ಆದ್ರೆ ಇಬ್ಬರು ಪೂಜಾರಿನ ಬಿಟ್ಟಿ ಯಾರನ್ನು ಒಳಗೆ ಬಿಡಲ್ಲ ಅಂದ್ರು.  ಸರಿ ಅಂತ ಹೊರಗೆ ನಿಂತ್ಕೊಂಡೊ.  ಆ ಊರಿನ ಸ್ವಲ್ಪ ಜನರು ಕೂಡ ಹೊರಗೆ ನಿಂತಿದ್ರು.

ಎಲ್ಲೋ ದೂರದಲ್ಲಿ ಪೋಲೀಸು ಸೈರನ್ ಕೇಳುಸ್ತು, ಐ ಥಿಂಕ್ ಅಬ್ದುಲ್ ಕಲಾಂ ಬಂದ್ರು ಅಂತ ಎಲ್ಲ ಆನ್ಕೊಂಡೊ.  ಕಾರ್ ಸೈರನ್ ಜೊರಾಯ್ತು, ಪೋಲೀಸ್ ಕಾರ್ ಬಂದಿ ನಿಲ್ಲಿಸಿ ಎಲ್ಲ ಕೆಳಗೆ ಇಳುದ್ರು, ಮಧ್ಯದಲ್ಲಿದ್ದ ಕಾರ್ ಅಲ್ಲಿ ಅಬ್ದುಲ್ ಕಲಾಂ ಕೆಳಗೆ ಇಳುದ್ರು.  ಮೂರ್ ಜನನು ಮೋದುಲ್ನೆ ಬಾರಿಗೆ ಅಬ್ದುಲ್ ಕಲಾಂ ನ ಲೈವ್ ಆಗಿ ನೋಡಿತ್ತು, ಫುಲ್ ಖುಷಿ ಪಟ್ಟೋ!  ದೇವಸ್ಥಾನದ ಸಕಲ ಮರ್ಯಾದಿಯೊಂದಿಗೆ, ಡೊಳ್ಳು, ನಾಗಾರಿಯೊಂದಿಗೆ ಕಲಾಂರನ್ನ  ದೇವಸ್ಥಾನದ ಒಳಗೆ ಕರೆದುಕೊಂಡಿ ಹೋದ್ರು.  ಏನಾದ್ರೂ ಮಾಡಿ ಅವ್ರ್ ಆಟೋಗ್ರಾಫ್ ಪಡಿಬೇಕು ಅಂತ, ಬ್ಯಾಗಲ್ಲಿರೋ ಬುಕ್ ತಗ್ದೋ.  ಒಬ್ಬ ಪೋಲೀಸು ನಮ್ನ ನೋಡ್ತಾ ಇದ್ದ.  ಕೊನೆಗೆ ಹತ್ರ ಬಂದಿ ಏನದು ಅಂದ, ಅಬ್ದುಲ್ ಕಲಾಂ ಆಟೋಗ್ರಾಫ್ ಹಾಕುಸ್ಕೋಬೇಕಾಗಿತ್ತು, ಆದಿಕ್ಕೆ ಬುಕ್ ತಗ್ದೋ ಆಂದೋ.  ಆದೇನ್ ಅನ್ನುಸ್ತೋ ಗೊತ್ತಿಲ್ಲ, ನನ್ನ ಬುಕ್ಕು, ಪೆನ್ನು ಇಸ್ಕೋಂಡ್ ಹೋದ.  ಆವಾಗ ಧನಂಜಯ್ ಕಾಲ್ ಮಾಡಿ ನಾನು ಸ್ಕೂಲ್ ಅತ್ರ ಇದ್ದೀನಿ ಅಂದ, ಬೇಗ ದೇವಸ್ಥಾನಕ್ಕೆ ಬಾ ಆಂದೋ. ಅಲ್ಲಿಂದ 5 ನಿಮಿಷಕ್ಕೆ ಒಡ್ಬಂದ.  ನಾಲಕ್ಕು ಜನನು ಹೊರಗೆ ನಿಂತಿದ್ದೋ.  ಅಷ್ಟ್ರಲ್ಲಿ ದೇವಸ್ಥಾನದ ಒಳಗೆ ಹೋಗಿದ್ದ ಅಬ್ದುಲ್ ಕಲಾಂ ಹೊರಗೆ ಬಂದ್ರು, ಅವರಿಗೆ ಕಲ್ಕುಂಟೆಯ ಫೇಮಸ್ ಆದ ಪುಳಿಹೊಗರೆ, ಸಿಹಿ ಪೊಂಗಲ್ ಕೊಡಕ್ಕೆ ಒಂದ್ ರೂಂ ಒಳಗೆ ಕರೆದುಕೊಂಡಿ ಹೋದ್ರು.  ಪೊಲೀಸ್ನೋರು ರೂಂ ಒಳಗೆ ಹೋದ್ರು.  ನಮ್ ಅತ್ರ ಬುಕ್ ಯಾಕ್ ಪೋಲೀಸು ಅವ್ನು ಇಸ್ಕೊಂಡ ಅಂತ ಯೋಚ್ನೆ ಮಾಡ್ತೀರ್ಬೇಕಾದ್ರೆನೆ, ಆ ಪೊಲೀಸು ಅಬ್ದುಲ್ ಕಲಾಂ ಇರೋ ರೂಂ ಒಳಗೆ ಹೋದ.  ಆ ಪೋಲೀಸು ನಮ್ಗೆ ಆಟೋಗ್ರಾಫ್ ಹಾಕುಸ್ಕೊಂಡಿ ಬರಕ್ಕೆ ಹೋಗಿದ್ದಾರೇನೋ ಆನ್ಕೊಂಡೊ.  ಒಂದ್ 5 ನಿಮಿಷ ಬಿಟ್ಟಿ ಹೊರಗ್ ಬಂದ ಪೊಲೀಸ್, ಅಬ್ದುಲ್ ಕಲಾಂ ಆಟೋಗ್ರಾಫ್ ಹಾಕಿದ್ದ ಪೇಜ್ನ ಅರ್ಕೋಂಡಿ, ಬುಕ್ಕು ಪೆನ್ನು ವಾಪಸ್ ಕೊಟ್ಟಿ ಹೋದ.  ನಾವು ಸಾರ್ ಸಾರ್ ಅಂದ್ರು ಏನು ಮಾತಾಡ್ದಿರ ಹೋದ.

ಹೋಗ್ಲಿ ಬಿಡು ಆನ್ಕೊಂಡಿ, ನಾವು ಏನಾದ್ರೂ ಮಾಡಿ ಆಟೋಗ್ರಾಫ್ ಹಾಕುಸ್ಕೋಬೇಕು ಆನ್ಕೊಂಡೊ.  ಆ ರೂಂನಿಂದ ಹೊರಗೆ ಬಂದ ಅಬ್ದುಲ್ ಕಲಾಂ, ಊರಿನ ಜನರ ಹತ್ತಿರ ಮಾತಡಕ್ಕೆ ಹೋದ್ರು, ಜನ ಎಲ್ಲ ಫುಲ್ ತುಂಬ್ಕೊಂಡ್ರೂ, ನಾನು, ನವೀನ, ಧನಂಜಯ್ ಮದ್ಯದಲ್ಲಿ ನುಗ್ದೋ.  ಪೊಲೀಸ್ ಅವ್ರ್ನು ಬೀಟ್ ಮಾಡಿ, ಅಂತೂ ಇಂತೂ ಅಬ್ದುಲ್ ಕಲಾಂ ಎದುರ್ಗಡೆ ಹೋಗಿ ನಿಂತ್ಕೊಂಡೆ.  ನನ್ ಹೋಗೋಷ್ಟ್ರಲ್ಲಿ ಅಬ್ದುಲ್ ಕಲಾಂ ನವೀನುಂಗೆ ಆಟೋಗ್ರಾಫ್ ಹಾಕ್ತ ಇದ್ರು! ಜನ ಫುಲ್ ತುಂಬ್ಕೊಂಡಿ ನುಕ್ತಾ ಇದ್ರು,  ಅದ್ರಲ್ಲು ಧನಂಜಯ್, ಅವ್ನ್ ಕ್ಯಾಮರಾದಲ್ಲಿ ಫೋಟೋ ತಗ್ದ.  ಅದೇ ಈ ಕೆಳಗಿರೋ ಫೋಟೋ, ನವೀನ, ಅಬ್ದುಲ್ ಕಲಾಂ ಸ್ಪಷ್ಟವಾಗಿ ಕಾಣುತ್ತಾರೆ, ನಾನು ನವೀನನ ಪಕ್ಕದಲ್ಲಿ ಇದ್ದೇ.

naveena and kalam
ನವೀನ ಮತ್ತು ಅಬ್ದುಲ್ ಕಲಾಂ

ನವೀನುಂಗೆ ಆಟೋಗ್ರಾಫ್ ಹಾಕಿತ್ತಕ್ಷ್ಣ, ನಾನು ನನ್ ಬುಕ್ಕು, ಪೆನ್ನು (ಪೆನ್ನು ಧನಂಜಯನದು) ಕೊಟ್ಟೆ. ಪೆನ್ ಕೈ ಅಲ್ಲಿ ಇಡ್ಕೊಂಡ ಅಬ್ದುಲ್ ಕಲಾಂ ಆಟೋಗ್ರಾಫ್ ಹಾಕ್ಬೆಕು,  ಅಷ್ಟ್ರಲ್ಲಿ ಪೋಲೀಸುನೋರು ಜನ ಜಾಸ್ತಿ ಹಾಗ್ತಿರೋದ್ ನೋಡಿ, ಸಾಕು ಸಾಕು ಅಂತ, ಪೆನ್ನು ಬುಕ್ ಎರಡನ್ನೂ ಅಬ್ದುಲ್ ಕಲಾಂ ಇಂದ ಇಸ್ಕೊಂಡಿ, ನಂಗೆ ವಾಪಸ್ ಕೊಟ್ರು.  ನಾನು ಸಾರ್ ಸಾರ್ ಪ್ಲೀಸ್ ಅಂದೆ, ಅಬ್ದುಲ್ ಕಲಾಂ ನನ್ನ ನೋಡಿ ಅವ್ರ್ ಕೈ ಅಲ್ಲಿ ಇದ್ದ ಎರಡ್ ರೋಸ್ ನ ಕೊಟ್ರು!  ಆಮೇಲೆ ನಂಗೂ ಥ್ಯಾಂಕ್ಸ್ ಕೊಟ್ಟಿ ಕೈ ಕುಲ್ಕುದ್ರು.  (ನವೀನ್ಗೂ ಒಂದ್ ಥ್ಯಾಂಕ್ಸ್ ಸಿಕ್ಕಿತ್ತು).  ಜೀವನ ಪಾವನವಾಯ್ತು ಅಂತರಲ್ಲ, ಆ ಕ್ಷಣಕ್ಕೆ ಹಾಗೆ ಅನ್ನಿಸಿತ್ತು! ಪೊಲೀಸ್ನೋರು ಎಲ್ರೂನ್ನು ತಳ್ಳಿ ಅಬ್ದುಲ್ ಕಲಾಂ ನ ಸ್ಕೂಲ್ ಅತ್ರ ಕರೆದುಕೊಂಡಿ ಹೋದ್ರು.  ನಮ್ಗೆ ಒಂದ್ 15 ನಿಮಿಷ ಎನ್ ಮಾಡ್ಬೇಕು ಅಂತನೇ ಗೊತ್ತಾಗ್ಲಿಲ್ಲ.  ನನಗೆ ಎರಡ್ ರೋಸ್, ಕೈ ಕುಲ್ಕೋ ಚಾನ್ಸ್ ಸಿಕ್ತು, ನವೀನ್ಗೆ ಆಟೋಗ್ರಾಫ್, ಮತ್ತೆ ಕೈ ಕುಲ್ಕೋ ಚಾನ್ಸ್, ಧನಂಜಯ್ ಪೆನ್ ನ ಅಬ್ದುಲ್ ಕಲಾಂ ಸ್ವಲ್ಪ ಹೊತ್ತು ಕೈ ಅಲ್ಲಿ ಇಡ್ಕೊಂಡಿದ್ರು, ಪ್ರಪಂಚನೆ ಗೆದ್ದಿರೋ ಖುಷಿ ತಾರ ಇತ್ತು.

apj kalamಇಷ್ಟೆಲ್ಲ ಅದ್ಮೇಲೆ ಸ್ಕೂಲ್ ಅತ್ರ ಹೊದೋ, ಅಲ್ಲಿ ಫುಲ್ ಸೆಕ್ಯುರಿಟಿ, ತುಂಬಾ ದೂರದಿಂದ ಸ್ಟೇಜ್ ಮೇಲೆ ಇರೋ ಅಬ್ದುಲ್ ಕಲಾಂ ನ ದೊಡ್ಡ ಪರದೆ ಮೇಲೆ ನೊಡ್ಬೇಕಿತ್ತು.  ನನ್ನ ಕ್ಯಾಮರಾ ಲೆನ್ಸ್ ಇಂದ ಜೂಮ್ ಹಾಕುದ್ರು, ಕ್ಲ್ಯಾರಿಟಿ ಫೋಟೋ ಬರ್ಲಿಲ್ಲ.  ಆದ್ರೂ ಅವ್ರ ಮಾತು ಕೆಳ್ಬೆಕು ಅಂತ ಪರದೆ ಮುಂದೆನೇ ನಿಂತ್ಕೊಂಡಿ ಕೆಳ್ದೋ.  ಅವ್ರ ಭಾಷಣ ಮೊಸ್ಟ್ ಇನ್ಸ್ಪಿರೇಷನ್ ಆಗಿತ್ತು.  ಎಷ್ಟೋ ಜನ ಮೊಬೈಲ್ ಅಲ್ಲಿ ರೆಕಾರ್ಡ್ ಮಾಡ್ಕೊಂಡ್ರು.  ನಮ್ ಧನಂಜಯನು ಮಾಡ್ಕೊಂಡ.  ಅವರು ಭಾಷಣದ ಮಧ್ಯ ಹೇಳಿದ ಒಂದು ಮಾತು ಇನ್ಸ್ಪಿರೇಷನ್ ಆಗಿತ್ತು.  ಅದನ್ನ ಅಬ್ದುಲ್ ಕಲಾಂ ಹೇಳೋವಾಗ್ಲೆ ನಾನು ಫೋಟೋ ಕ್ಲಿಕ್ಕ್ಕಿಸಿದ್ದೆ, ಪಕ್ಕದಲ್ಲಿ ಇರುವ ಫೋಟೋ ಅದೆ.  ಅವರ ಭಾಷಣ ಮುಗಿದಮೇಲೆ ಸ್ವಲ್ಪ ಹೊತ್ತು ಇದ್ದು, ನಂತರ ದೆಹಲಿಗೆ ಹೊರಡ್ಬೇಕು ಅಂತ ಹೊರಟ್ರು.  ಈ ದಿನ ನಮಗೆ ಮರೆಯಲಾಗದ ದಿನ ಆನ್ಕೊಂಡಿ,  ಚಂದ್ರಶೇಖರನಿಗೆ ತುಂಬಾ ತುಂಬಾ ಥ್ಯಾಂಕ್ಸ್ ಹೇಳಿ ಅಲ್ಲಿಂದ ಹೊರಟೋ.

ಅಲ್ಲಿಂದ ಹೊರಟಿ ಮನೆಗೆ ಸೇರಿದ್ದು, ಒಂದು ದೊಡ್ಡ ಕತೆನೆ, ಅದೆಲ್ಲ ಬರುದ್ರೆ ಇನ್ನೂ ಒಂದ್ ಮೂರ್ ನಾಲ್ಕ್ ಪ್ಯಾರಾ ಆಗುತ್ತೆ, ಇವಾಗ ಬ್ಯಾಡ ಅದು.  ಬೆಳಗ್ಗೆ ನ್ಯೂಸ್ ಪೇಪರ್ ಓದುತ್ತಾ ಇದ್ದಾಗೆ ಬಂದ ಆಸೆ ಸೂಪ್ಪರಾಗಿ ಫುಲ್ ಫಿಲ್ ಆಯ್ತು!  ನಾನು IISc ಗೆ ಹೋಗಿದ್ರೂ ಇತರ ಕಲಾಂನಾ ನೋಡಕ್ಕೆ ಆಗ್ತಿರ್ಲಿಲ್ಲ.  ಆಸೆ ಫುಲ್ ಫಿಲ್ ಮಾಡಿದ್ದ ಚಂದ್ರಶೇಖರನಿಗೆ ಒಂದು ದೊಡ್ಡ ಥ್ಯಾಂಕ್ಸ್.  ನಾನು, ನವೀನ ಮತ್ತು ಧನಂಜಯ ಅಂದು ಮನೆಗೆ ಹೋದಾಗ ರಾತ್ರಿ ಹತ್ತುವರೆ.  ಮನೆಗೆ ಹೋದವನೆ ಅಬ್ದುಲ್ ಕಲಾಂ ಕೊಟ್ಟಿದ್ದ ರೋಸ್ ನ ತೋರ್ಸಿ ಈ ಕತೆನೆಲ್ಲ ಹೇಳಿದ್ದಾಯ್ತು.  ರಾತ್ರಿ  ಮಲ್ಕೊಂಡಾಗು ಅದೆ ನೆನಪು.

autograph
ಅಬ್ದುಲ್ ಕಲಾಂ ಅವರ ಆಟೋಗ್ರಾಫ್
rose
ಅಬ್ದುಲ್ ಕಲಾಂ ನನಗೆ ಕೊಟ್ಟ ರೋಸ್!

 

 

 

 

 

 

 

ಅಬ್ದುಲ್ ಕಲಾಂ ಅವರು ದೇವಸ್ಥಾನಕ್ಕೆ ಬಂದಾಗ, ನನ್ನ ಮೊಬೈಲ್ ಅಲ್ಲಿ ತೆಗೆದ ವೀಡಿಯೋ…

——-

(ಬೆಂಗಳೂರಿನ ಇಂಗ್ಲಿಷ್ ಮಿಶ್ರಿತ ಕನ್ನಡಕ್ಕೆ ಕ್ಷಮೆ ಇರಲಿ)

-ವಿಶ್ವ ಕೀರ್ತಿ .ಎಸ್

ನಾ ಕಂಡ “ಮಲೆಗಳಲ್ಲಿ ಮದುಮಗಳು”

ಇಲ್ಲಿ ಯಾರು ಮುಖ್ಯರಲ್ಲ; ಯಾರು ಅಮುಖ್ಯರಲ್ಲ, ಯಾವುದು ಯಕ:ಶ್ಚಿತವಲ್ಲ, ಇಲ್ಲಿ ಯಾವುದಕ್ಕೂ ಮೊದಲಿಲ್ಲ, ಯಾವುದಕ್ಕು ತುದಿಇಲ್ಲ, ಇಲ್ಲಿ ಅವಸರವು  ಸಾವದಾನದ ಬೆನ್ನೇರಿದೆ, ಇಲ್ಲಿ ಎಲ್ಲಕ್ಕೂ ಇದೆ ಅರ್ಥ, ಯಾವುದು ಅಲ್ಲ ವ್ಯರ್ಥ. ನೀರೆಲ್ಲವು ತೀರ್ಥ, ತೀರ್ಥವು ನೀರೇ.

     ಇದು ಕುವೆಂಪುರವರು ಈ ಕಾದಂಬರಿಯ ಮೊದಲ ಪುಟದಲ್ಲಿ ಬರೆದ ಸಾಲುಗಳು.  ಅದರ ಅರ್ಥ ಎಷ್ಟು ದೊಡ್ಡದು ಎನ್ನುವುದನ್ನು ಮತ್ತೊಮ್ಮೆ ಮಗದೊಮ್ಮೆ ನೀವೇ ಓದಿ ನೋಡಿ, ತಿಳಿಯುತ್ತದೆ.  ನನ್ನ ಪ್ರಕಾರ ಇವು  ಅದ್ಬುತ ಸಾಲುಗಳು.

     ಎಪ್ಪತ್ತರ ದಶಕದಲ್ಲಿ “ಶ್ರೀ ರಾಮಾಯಣ ದರ್ಶನಂ” ರಚಿಸಿದ ಕುವೆಂಪುರವರು, ತದನಂತರ ರಚಿಸಿದ್ದು ಕನ್ನಡದ ಮಹಾಕಾವ್ಯಗಳಲ್ಲಿ ಒಂದಾದ “ಮಲೆಗಳಲ್ಲಿ ಮದುಮಗಳು”. ಮಲೆನಾಡಿನ ಜನರ ಜೀವನ ಶೈಲಿ, ಅವರ ಮೂಡನಂಬಿಕೆ, ಜಾತಿ, ಮತ, ಧರ್ಮ, ಹೆಣ್ಣಿನ ಶೋಷಣೆ ಎಲ್ಲವನ್ನೂ ನೈಜ ರೂಪದಲ್ಲಿ ಈ ಕಾದಂಬರಿಯಲ್ಲಿ ಚಿತ್ರಿಸಿದರು.  ಇಂದಿಗೂ ಇದು ತುಂಬಾ ಜನಪ್ರಿಯವಾದ ಕಾದಂಬರಿ.  ಇತ್ತೀಚೆಗೆ ಬೆಂಗಳೂರಿನ ಕಲಾಗ್ರಾಮದಲ್ಲಿ ನೆಡೆದ ಈ ನಾಟಕವು ನಿಜವಾಗಲೂ ಮೇಲಿನ ಮಾತನ್ನು ಪುಶ್ಟಿಕರಿಸಿತ್ತು.

     ಈ ನಾಟಕವು ಕರ್ನಾಟಕದ ಸಾಂಸ್ಕೃತಿಕ ಲೋಕದಲ್ಲೇ ಒಂದು ವಿಶಿಷ್ಟವಾದ ಪ್ರಯೋಗ ಎಂದರೆ ತಪ್ಪಾಗಲಾರದು.  ಸುಮಾರು 700 ಪುಟಗಳಿರುವ ಕಾದಂಬರಿಯನ್ನು ಡಾ. ಕೆ. ವೈ. ನಾರಾಯಣಸ್ವಾಮಿಯವರು ರಂಗರೂಪಕ್ಕೆ ತಂದಿದ್ದರು (ಇವರು ನನಗೆ ಪದವಿಯ ತರಗತಿಯಲ್ಲಿ ಕನ್ನಡ ಮೇಷ್ಟ್ರು ಆಗಿದ್ದರು).  ನಿರ್ದೇಶಿಸಿದ್ದು ಸಿ. ಬಸವಲಿಂಗಯ್ಯ ನವರು. ಇದಕ್ಕೆ ಹಂಸಲೇಖರವರು ಸಂಗೀತ ಕೊಟ್ಟಿದ್ದರು.  ಇದಲ್ಲದೆ ಅದ್ಬುತವಾದ ರಂಗಸಜ್ಜಿಕೆಯು ಈ ನಾಟಕದ ಮತ್ತೊಂದು ವಿಶೇಷ.  ಒಂದಲ್ಲ, ಎರಡಲ್ಲ, ಬರೋಬ್ಬರಿ ನಾಲ್ಕು ಬಯಲು ರಂಗ ಮಂದಿರವನ್ನು ನಾಟಕಕ್ಕೆ ಬೇಕಾಗುವಂತೆ ನಿರ್ಮಿಸಲಾಗಿತ್ತು.  ಇದರಲ್ಲಿ “ಕೆರೆ ಅಂಗಳ” ಬಯಲು ರಂಗವನ್ನು ಕಣ್ಣಿಗೆ ರಸದೌತಣವಾಗುವಂತೆ ನಿರ್ಮಿಸಿದ್ದರು.  ತಾತ್ಕಾಲಿಕವಾದ ಕೆರೆ, ಸೇತುವೆ, ಮನೆ, ಮರ, ಎಲ್ಲವನ್ನೂ ಕಟ್ಟಲಾಗಿತ್ತು.  ಇದೆಲ್ಲವನ್ನು “ಕರ್ನಾಟಕ ಕಲಾಗ್ರಾಮ” ಜ್ಞಾನಭರತಿ ಹಿಂಬಾಗದ ಆವರಣದಲ್ಲಿ ನಿರ್ಮಿಸಲಾಗಿತ್ತು.  ಇತರಹದ ನೈಜ ರಂಗ ಮಂದಿರದಲ್ಲಿ ನಾನು ನಾಟಕ ನೋಡಿದ್ದು ಮೊದಲನೆಬಾರಿ.

     ನಾಟಕವು ರಾತ್ರಿ ಪೂರಾ ಅಂದರೆ, ಸುಮಾರು 9 ಗಂಟೆಗಳ ವಿಶಿಷ್ಟ ಪ್ರಯೋಗವಾಗಿತ್ತು.  ಒಂದು ತಿಂಗಳು ಪೂರ್ತಿ (ದಿನ ಬಿಟ್ಟು ದಿನ) ನೆಡೆದ ನಾಟಕಕ್ಕೆ, ನನ್ನ ಕೆಲಸದ ಬಿಡುವಿನಲ್ಲಿ ಎರಡು ಬಾರಿ ಹೋಗಲು ಅವಕಾಶ ಸಿಕ್ಕಿತು.  ಮತ್ತೊಂದು ಬಾರಿ ಹೋಗೋಕ್ಕೆ ಟಿಕ್ಕೆಟು ಸಿಗಲಿಲ್ಲ.  ಒಂದೇ ಮಾತಲ್ಲಿ ಹೇಳೋದಾದ್ರೆ ನಾನು ಕಂಡ ಒಂದು ಅದ್ಬುತ ನಾಟಕ. ಒಟ್ಟು 74 ಕಲಾವಿದರು ನಟಿಸಿದ್ದ ನಾಟಕದಲ್ಲಿ, ಎಲ್ಲರ ಪ್ರದರ್ಶನವು ಅದ್ಬುತವಾಗಿ ಮೂಡಿಬಂದಿತ್ತು.  ನಾಟಕದಲ್ಲಿ ಬರುವ ಗುತ್ತಿ, ಹುಲಿಯ, ಐತ, ಪಿಚುಲು, ತಿಮ್ಮಿ, ವೆಂಕಣ್ಣಗೌಡ ಪಾತ್ರವನ್ನು ಮರೆಯಲು ಸಾದ್ಯವಿಲ್ಲ.  ಒಟ್ಟು 41 ಹಾಡುಗಳುನ್ನು ನಾರಾಯಣಸ್ವಾಮಿ ಅವರು ಈ ನಾಟಕಕ್ಕೆಂದೆ ರಚಿಸಿದ್ದರು. ಈಗಲೂ ಆ ಹಾಡುಗಳನ್ನೇ ಇನ್ನೂ ಕೇಳುತ್ತಿರುವೆ.  ಹಾಗೆಯೇ ಈ ನಾಟಕವು ಸಮಾಜದಲ್ಲಿ ಇರುವ ಜಾತಿ, ಮತ, ಧರ್ಮ, ‘ಗಳಿಂದ ಊಂಟಾಗುವ ಮೂಡನಂಬಿಕೆ ಇದರಿಂದಗುವ ಪರಿಣಾಮವನ್ನು ನಮ್ಮ ಕಣ್ಣೆದುರೆ ತಂದು ನಿಲ್ಲಿಸುತ್ತದೆ.  ಇಂದಿಗೂ ಚಾಲ್ತಿಯಲ್ಲಿರುವ (ಹೆಚ್ಚಾಗಿ ಹಳ್ಳಿಯ ಕಡೆ) ಇಂತಹ ಮೂಡನಂಬಿಕೆ, ಶೋಷಣೆಯ ವಿರುದ್ದ ಯೋಚನೆ ಮಾಡಬೇಕೆಂಬ ಅಂಶವನ್ನು ನಮ್ಮಲ್ಲಿ ಬಿತ್ತುತದೆ.

     ಒಟ್ಟಾರೆ ಹೇಳೋದಾದರೆ, ಈ ನಾಟಕವು ಮಲೆನಾಡಿನ ನೈಸರ್ಗಿಕ ಭಾಷೆಯ ಪ್ರೀತಿ, ವಾತ್ಸಲ್ಯ, ಹಾಸ್ಯ, ಬೈಗುಳ, ಮಲೆನಾಡಿನ ಸೌಂದರ್ಯ ಎಲ್ಲವನ್ನೂ ತನ್ನೊಳಗೆ ಚಿತ್ರಿಸಿಕೊಂಡಿತ್ತು.  ಒಂಬತ್ತು ಗಂಟೆ, ನಾಲಕ್ಕು ಬಯಲು ರಂಗದಲ್ಲಿ ನೋಡಿದ ನಾಟಕವು, ನನಗೆ ಒಂದು ಮರೆಯಲಾರದ ಅನುಭವ ನೀಡಿತು.  ನನ್ನ ಮಟ್ಟಿಗೆ, ಇದು ನಾನು ಕಂಡ ಒಂದು ಅದ್ಬುತ ನಾಟಕ.  ಈ ನಾಟಕವನ್ನು ಕನ್ನಡದ ಜನತೆಯ ಮುಂದಿಟ್ಟ ನಿರ್ದೇಶಕರಿಗೆ, ನನ್ನ ಮೇಷ್ಟ್ರಿಗೆ, ಕಲಾವಿದರಿಗೆ, ತಾಂತ್ರಿಕವರ್ಗದವರಿಗೆ, ಎಲ್ಲರಿಗೂ ಇಲ್ಲಿಂದಲೆ ನನ್ನದೊಂದು ಸಲಾಮ್.

     ನಾಟಕಕ್ಕೆ ಎರಡನೇ ಬಾರಿ ಹೋದಾಗ, ನನ್ನ ಜೊತೆಗೆ ನನ್ನ ಕ್ಯಾಮರಾವನ್ನು ಕರೆದುಕೊಂಡು ಹೋಗಿದ್ದೆ. ಆ ಕ್ಯಾಮರಾ ಕಂಡ “ಮಲೆಗಳಲ್ಲಿ ಮದುಮಗಳು” ಇಲ್ಲಿದೆ.

ಈ ನಾಟಕವು ಏಪ್ರಿಲ್ 18, 2013 ರಿಂದ  ಜೂನ್ 3, 2013 ವರೆಗೂ ನೆಡೆದಿತ್ತು.

– ವಿಶ್ವ ಕೀರ್ತಿ. ಏಸ್, ಜೂನ್ 26, 2013.

ದುಡ್ಡಲ್ಲ ಮುಖ್ಯ, ಜನ

ಅಂದು 26 ಅಕ್ಟೋಬರ್, ಪಾಂಡುಪುರ  ರೈಲ್ವೆ ನಿಲ್ದಾಣದಲ್ಲಿ ಬೆಳಗ್ಗೆ 9 ಗಂಟೆಗೆ ಇದ್ದೋ, ಅಲ್ಲಿಂದ ಹತ್ತು ಮಾರು ದೂರದಲ್ಲಿದ್ದ ಬಸ್ ಸ್ಟ್ಯಾಂಡ್ಗೆ ನಡೆದುಕೊಂಡು ಹೋಗಿ, ಅಲ್ಲಿದ್ದ ಒಬ್ಬ ಮ್ಯಾಕ್ಸಿಕ್ಯಾಬ್ ಹತ್ತಿರ, ಸಾರ್ ರಂಗನತಿಟ್ಟು ಪಕ್ಷಿಧಾಮಕ್ಕೆ ಹೋಗ್ಬೇಕು ಬರ್ತಿರಾ ಅಂದೋ.  ಓ ಬರ್ತೀನಿ, ಎಷ್ಟು ಜನ ಇದ್ದೀರಾ ಅಂದ. ಎಳ್ ಜನ ಇದ್ದಿವಿ ಅಂದೋ.  ಏನ್ ಕೀರ್ತಿ ಕತೆ ಹೇಳ್ತಿದ್ದಾನೆ ಅಂತೀರಾ, ಸ್ವಲ್ಪ ಇರಿ, ನಾನು ಇದೆ ತರ ಶುರು ಹಾಗೋ ಕತೆಗಳನ ಪ್ರಜಾವಾಣಿಲಿ ಓದಿದ್ದೆ, ಆತರ ನಾನು ಬರುದ್ರೆ ಹೆಂಗಿರುತ್ತೆ ಅನ್ನುಸ್ತು ಅದಿಕ್ಕೆ ಹಂಗೆ ಬರದೆ, ಹಿ ಹಿ ಹಿ ಖುಷಿ ಆಯ್ತು.  ಸರಿ ಈಗ ಕತೆಗೆ ಬರಣ. ದುಡ್ಡ್ ಎಷ್ಟಾಗುತ್ತೆ ಅಂದೋ, ಅದಕ್ಕೆ ಅವ್ನು ಒಂದ್ 600 ರೂಪಯಿ ಕೊಡಿ ಸರ್, ನಿಮ್ನ ರಂಗನತಿಟ್ಟು ಗೆಟ್ ಅತ್ರನೆ ಬಿಡ್ತೀನಿ ಅಂದ.  ಹೋಗಯ್ಯ ಹೋಗು ನಾವು ಈ ಉರೊರೆ, ನಮ್ಗೆ ಟೋಪಿ ಹಾಕ್ತ್ಯ, ಪಾಂಡುಪುರ ಇಂದ ಶ್ರೀರಂಗಪಟ್ಟಣ ಒಂದ್ ಆರ್ ಕಿಲೋಮಿಟ್ರು, ಅಲ್ಲಿಂದ ರಂಗನತಿಟ್ಟು ಗೇಟು ನಾಲ್ಕ್ ಕಿಲೋಮಿಟ್ರು, ಒಟ್ಟು ಹತ್ತ್ ಕಿಲೋಮಿಟ್ರುಗೆ ಆರನುರ್ ರುಪಾಯಿ ಕೊಡ್ಬೇಕ, ಬ್ಯಾಡ ಹೋಗಯ್ಯ, ಅಷ್ಟು ದುಡ್ಡ್ ಕೊಡೋರ್ ಯಾರದ್ರು ಬರ್ತಾರೆ ಕಾಯಿ ಅಂತ ಹೇಳಿ ಮೊದ್ಲು ನಾಷ್ಟ ಮಾಡಣ ಅಂತ ಹೋಟೆಲ್ಗೆ ಹೋದೋ.

ನಾಷ್ಟ ಮಾಡ್ಕೊಂಡಿ ಬಂದೋ, ಬಸ್ ಸ್ಟಾಂಡ್ ಹತ್ರನೇ ಆ ಮ್ಯಾಕ್ಸಿಕ್ಯಾಬ್ ಅವ್ನು ನಿಂತಿದ್ದ.  ಏಲ್ರು ಅವನ ಗಾಡಿ ಹತ್ರಾನೆ ನೇರವಾಗಿ ನೆಡ್ಕೊಂಡಿ ಹೋಗಿ, ಉಲ್ಟಾ ತಿರುಗಿ ನಿಂತ್ಕೊಂಡೊ.  ನಾವ್ ಹೋಗಿ ಅವ್ನ ಹತ್ತಿರ ಮಾತಾಡ್ತಿವೇನೋ ಅನ್ಕೊಂಡ. ಅಷ್ಟರಲ್ಲಿ ಒಂದ್ ಲಾರಿ ಸ್ಪಿಡಾಗಿ ಬರ್ತ್ತಿತ್ತು, ಎಲ್ರು ಸುಮ್ನೆ ನೋಡೋಣ ಅಂತ ಕೈ ಅಡ್ಡ ಹಾಕ್ದೋ, ಅವ್ನು ನಮ್ಮನ್ನು ನೋಡಿ ಸ್ವಲ್ಪ ದೂರ ಹೋಗಿ ನಿಲ್ಲುಸ್ದ.  ಏನು ಅಂತ ಕೇಳದ? ಪಟ್ಟಣ.. ಪಟ್ಟಣ ಅಂದೋ, ಬನ್ನಿ ಬನ್ನಿ.. ಎಸ್ಟ್ ಜನ ಅಂದ, ಏಳ್ ಜನ ಅಂದೋ, ಹತ್ತಿ ಹತ್ತಿ ಅಂತ ಮುಂದೆ ಡೋರ್ ಓಪನ್ ಮಾಡ್ದ.  ಎಲ್ರು ಹತ್ತಿ ಕುತ್ಕೊಂಡೊ ಸ್ವಲ್ಪ ದೂರ ಹೋಗ್ತಾ ಇದ್ದಾಗ, ನಾವು ಅಂಕಲ್ ನ ಮಾತಾಡುಸ್ದೋ, ಅಂಕಲ್ ನಿಮ್ ಹೆಸರೇನು? ಏನ್ ಮಾಡ್ತಿರ? ಅಂದೋ.  ನನ್ನ ಹೆಸರು ಶ್ರೀಧರ್ ಅಂತ, ಮೈಸೂರ್ ಗೆ ಕೆಲ್ಸದ್ಮೇಲೆ ಹೋಗ್ತಾ ಇದ್ದೀನಿ ಅಂದ್ರು.  ಸರಿ, ಅಂತು ಇಂತು ಮ್ಯಾಕ್ಸಿಕ್ಯಾಬ್ ಅವನ್ಗೆ ಸರಿಯಾಗಿ ಬುದ್ದಿ ಕಲುಸ್ದೋ ಅನ್ಕೊಂಡೋ, ಅವನು ನೋಡ್ತಾನೆ ಇದ್ದ, ಅವನ ಮುಂದೇನೆ ನಾವು ಲಾರಿಗೆ ಹತ್ತಿದ್ದು ಸೂಪರ್ ಅಲ ಅಂತ ಮಾತಾಡ್ಕೊಂಡೋ.  ಲಾರಿ ಲಿ ಇದ್ದಿವಿ ಅಂತ ನನ್   ಕ್ಯಾಮೆರಾ ತಗ್ದಿ ಅಂಕಲ್ ಫೋಟೋ ತಗ್ದೆ.  ಹಂಗೆ ಬೇರೆ ಫೋಟೋಗಳ್ನ ತಗಿತಿದ್ದೆ.  ಆಮೇಲೆ ಅಂಕಲ್ ನ ಕೆಳ್ದೋ, ಅಂಕಲ್ ರಂಗನತಿಟ್ಟುಗೆ ಹೋಗ್ತಿದ್ದೀವಿ, ಹೆಂಗೆ ಹೋಗೋದು.  ನಾನು ಶ್ರೀರಂಗಪಟ್ಟಣದ ಒಂದು ಕ್ರಾಸ್ ಹತ್ತಿರ ಬಿಡ್ತೀನಿ, ಅಲ್ಲಿ ಸ್ವಲ್ಪ ಮುಂದೆ ಹೋಗಿ ಒಂದು ರೈಲ್ವೆ ಕ್ರಾಸ್ ಬರುತ್ತೆ, ಅಲ್ಲಿಂದ ಮೂರೂ ಕಿಲೋಮಿಟ್ರು ನಡ್ಕೊಂಡು ಹೋಗ್ಬೇಕು, ಇಲ್ಲಾಂದ್ರೆ ಬಸ್ ಬರುತ್ತೆ ಸ್ವಲ್ಪ ಹೊತ್ತು ಕಾಯ್ರಿ ಅಂದ್ರು.  ಸರಿ ಅಂಕಲ್ ಅಂದೋ, ಇನ್ನೇನು ಆ ಕ್ರಾಸ್ ಬರ್ಬೋದೇನೋ ಅನ್ಕೊಂಡಿ, ನಾನು ನವೀನ, ಸಂತೋಷ್ ಮಾತಾಡ್ಕೊಂಡಿ, ತಲಾ ಹತ್ತು ರುಪಾಯಿ ಅನ್ಕೊಂಡ್ರೆ, ಏಪ್ಪತ್ತು ರುಪಾಯಿ ಆಗುತ್ತೆ.  ಅಷ್ಟು ದುಡ್ಡನ ಅಂಕಲ್ಗೆ ಕೊಡನ ಅನ್ಕೊಂಡೋ.  ಅಷ್ಟರೊಳಗೆ ಕ್ರಾಸ್ ಬಂತು,  ಇದೆ ಆ ಕ್ರಾಸ್, ಇಲ್ಲೇ ಇಳಿರಿ ಅಂದ್ರು ನಾವು ದುಡ್ಡು ಏತ್ತಿ ಅಂಕಲ್ಗೆ ತಗೋಳಿ ಅಂಕಲ್ ಅಂದೋ, ಅಂಕಲ್ ನಿವ್ ಯಾಕೆ ದುಡ್ಡ್ ಕೊಡ್ತೀರ, ನನ್ ನಿಮ್ನ ದುಡ್ಡುಗೋಸ್ಕರ ಕರ್ಕೊಂಡಿ ಬರ್ಲಿಲ್ಲ. ನೀವೆಲ್ಲ ಹುಡ್ಗುರು, ವಿಧ್ಯಾರ್ತಿಗಳು, ನಾನು ಹೆಲ್ಪ್ ಮಾಡ್ದೆ ಅಷ್ಟೇ, ದುಡ್ಡ್ ಏನ್ ಬೇಡ, ಆರಾಮಾಗಿ ಹೋಗ್ ಬನ್ನಿ ಅಂದ್ರು.  ನಮ್ಗೆಲ್ಲ ಒಂತರಾ ಮೈ ಜುಮ್ ಅಂತು, ಏನಪ್ಪಾ ಇದು ಅಂಕಲ್ ದುಡ್ಡೇ ತಗೊತಿಲ್ವಲ್ಲ ಅಂತ, ಇಲ್ಲ ಅಂಕಲ್ ನಿವ್ ದುಡ್ಡ್ ತಗೊಳ್ಳೇ ಬೇಕು, ತಗೊಳ್ಳಿ ಅಂತ ಎಷ್ಟು ಹೇಳುದ್ರು ಕೇಳಲಿಲ್ಲ, ನಿಮ್ಮ ಖುಷಿ ಅಂತ ಹತ್ತ್ರುಪಾಯಿ ಕೊಡಿ ಸಾಕು ಅಂತ ಹೇಳಿ, ಉಲ್ದಿತ್ ದುಡ್ಡೆಲ್ಲ ಕೊಟ್ಬುಟ್ರು.  ನಮ್ಗೆ ಏನ್ ಮಾಡಬೇಕು ಅಂತ ಗೊತಾಗ್ಲಿಲ್ಲ.  ತುಂಬಾ ಥ್ಯಾಂಕ್ಸ್ ಅಂಕಲ್ ಅಂದೋ.  ಅಯ್ಯೋ ಅಷ್ಟೊಂದ್ ಏನ್ ಬೇಡ್ರಪ್ಪ, ದುಡ್ಡ್ ಮಾಡಬೇಕು ಅಂತ ಇದ್ರೆ ಹೇಗಾದ್ರು ಮಾಡಬೋದಿತ್ತು.  ಆದ್ರೆ ಜೇವನದಲ್ಲಿ ಆದಲ್ಲ ಮುಖ್ಯ, ಜೀವನದಲ್ಲಿ ಮಾಡಬೇಕಾಗಿರೋದು ಜನನ ದುಡ್ಡಲ್ಲ, ಅಂತ ಹೇಳಿ ಲಾರಿ ಓಡುಸ್ಕೊಂಡಿ ಮರೆಯಾಗಿ ಹೋದ್ರು,

ಒಂದು ತಾಸ್ ಅಲ್ಲೇ ಇಬ್ರುನ್ನ ನೋಡ್ದೋ, ಒಬ್ಬರು ದುರಾಸೆಗೆ ಕೆಳುದ್ರೋ, ಅಥವ ಏನ್ ಯೋಚನೆ ಇಟ್ಕೊಂಡಿ ಕೆಳುದ್ರೋ ಗೊತ್ತಿಲ್ಲ, ಆದ್ರೆ ಹತ್ತ್ ಕಿಲೋಮಿಟ್ರುಗೆ ಆರನುರ್ ರುಪಾಯಿ ಕೇಳಬಾರದಿತ್ತು.  ಇನ್ನೊಬ್ರು ಪ್ರೀತಿಯಿಂದ ಮಾತಾಡ್ಸಿ, ಹೀಗೆ ಹೋಗ್ಬೇಕು ಅಂತ ದಾರಿನು ಹೇಳಿ, ನಮ್ ಖುಷಿಗೆ ಒಂದ್ ಹತ್ರುಪಾಯಿ ಇಸ್ಕೊಂಡಿ ಹೋದ್ರು.  ನಾನು ದುಡ್ಡ್ ಕಮ್ಮಿ ತಗೊಂಡ್ರು ಅದ್ರಿಂದ ಒಳ್ಳೆಯವರು ಅಂತಿಲ್ಲ.  ಅವ್ರು ಮನಸ್ ಮಾಡಿದ್ರೆ ನಮ್ಮ ಲಾರಿಲಿ ನಾನು ಕರ್ಕೊಂಡಿ ಬಂದಿದ್ದೀನಿ, ನೀವು ಇಷ್ಟೇ ದುಡ್ಡ್ ಕೊಡ್ಬೇಕು ಅಂತ ಕೆಳ್ಬೊದಿತ್ತು.   ಆದ್ರೆ ಅವ್ರು ಹಾಗ್ ಮಾಡ್ಲಿಲ್ಲ, ಎಲ್ರನ್ನು ಚನ್ನಾಗಿ  ಮಾತಾಡ್ಸಿ, ಒಳ್ಳೇದನ್ನೇ ಹೇಳಿ ಕಳುಸ್ಕೊಟ್ರು.  ಶ್ರೀಧರ್ ಅಂಕಲ್ ಗೆ ಒಂದು ಹಾಟ್ಸ್ ಆಫ್.

ನಾನು ಈ ತರ ಕತೆನೆಲ್ಲ ಹೇಳ್ತಿದ್ದಾಗ, ನಮಮ್ಮ ಯಾವಾಗ್ಲು ಹೇಳ್ತಿದ್ರು, ಪ್ರಪಂಚದಲ್ಲಿ ಇನ್ನು ಮಳೆ, ಬೆಳೆ ಚನ್ನಾಗಿ ಹಾಗ್ತಿದ್ದೆ ಅಂದ್ರೆ ಇ ತರ ಒಳ್ಳೆ ಜನಗೋಳು ಇರೋದ್ರಿಂದ ಅಂತ. ಇದ್ ನಿಜನೋ ಏನೋ ಗೊತ್ತಿಲ್ಲ. ಆದ್ರೆ ಇತರ ಜನ ಇನ್ನು ಪ್ರಪಂಚದಲ್ಲಿ ಇರೋದಂತೂ ನಿಜ.

-ವಿಶ್ವಕೀರ್ತಿ. ಎಸ್

ನಾ ಕಂಡ ನಾಟಕ- “ಚೋರ ಚರಣದಾಸ”

ಆ ನಾಟಕದ ಒಂದು ದೃಶ್ಯ

ಅಂದು ಜೂನ್ 23, 2012 ನನ್ನ ಪದವಿಯ ಕೊನೆಯ ದಿನಗಳು.  ಜೂನ್ 28 ರಂದು ತರಗತಿಯ ಕೊನೆಯ ದಿನ   ಎಂದು ತಿಳಿಸಲಾಗಿತ್ತು.  ಆ ದಿನವಾದ ಮೇಲೆ ನಾನೆಂದು ತರಗತಿಯಲ್ಲಿ ಕುರಲಾಗದು ಎಂದು ತುಂಬ ಬೇಜಾರು ಪಟ್ಟ ದಿನಗಳು.  ನಮ್ಮ ಕ್ಲಾಸಿನಲ್ಲಿ ಇರುವ ಸ್ನೇಹಿತರು ದೂರ ಹೋಗುತ್ತಾರೆ ಎಂದು ಮತ್ತಷ್ಟು ಬೇಜಾರು ಪಟ್ಟ ದಿನಗಳವು.  ಆದರು ಕೊನೆಯ ದಿನಗಳಲ್ಲಿ ಕಿರುಪರಿಕ್ಷೆ, ಸೆಮಿನಾರ್, ಪ್ರಯೋಗಗಳು, ಪರೀಕ್ಷೆಗೆ ತಯಾರಾಗುವುದು, ಅದು ಇದು ಎಂದು ಎಲ್ಲರೂ ತರಾತುರಿಯಲ್ಲಿದ್ದೆವು.

ನಾನು ನನ್ನ ಸ್ನೇಹಿತ ನವೀನ ಕೂಡ ಹೀಗೆ ಇದ್ದೆವು.  ಒಂದು ದಿನ ಮಧ್ಯಾನ ಊಟಕ್ಕೆಂದು ತೆರಳಿದಾಗ ತಟಕ್ಕನೆ ಒಂದು ನೋಟೀಸು ಕಣ್ಣಿಗೆ ಬಿತ್ತು.  ಹತ್ತಿರ ಹೋಗಿ ನೋಡಿದಾಗ, ಅದು ಪ್ರದರ್ಶನ ಕಲಾ ವಿಭಾಗದ ಪರೀಕ್ಷಾರ್ಥ ನಾಟಕೋತ್ಸವ, ಎಲ್ಲರನ್ನು ಆಹ್ವಾನಿಸಲಾಗಿದೆ ಎಂದು ತಿಳಿಯಿತು.  ಒಟ್ಟು ಆರು ನಾಟಕಗಳು ಎರಡು ದಿನ ಪ್ರದರ್ಶನಗೊಳ್ಳುತ್ತಿವೆ, ಯಾವ ಯಾವ ನಾಟಕಗಳು ಪ್ರದರ್ಶನಗೊಳುತ್ತಿವೆ ಎಂದು ಆ ನೋಟೀಸ್ ನಲ್ಲಿ ಇತ್ತು.  ವಿಶ್ವವಿದ್ಯಾಲಯದಲ್ಲಿ ಸಮಯ ಕಳೆಯುವ ಕೊನೆಯ ದಿನಗಳು ನಮ್ಮ ಮುಂದಿದ್ದವು.  ಅದೇನೇ ಆದರು, ಕ್ಲಾಸನ್ನು ರಜ ಹಾಕಿಯಾದರೂ ಈ ನಾಟಕಗಳನ್ನು ನೋಡಲೇಬೇಕು ಎಂದು ಮಾತಾಡಿಕೊಂಡೆವು.

25 ಸೋಮವಾರ, ಬೆಳಗ್ಗೆ ಅನಿವಾರ್ಯವಾಗಿ ಇಬ್ಬರು ಕ್ಲಾಸಿಗೆ ಹೋಗಲೇಬೇಕಾಯಿತು.  ಮಧ್ಯಾನ ಊಟ ಮಾಡಿಕೊಂಡು ಹೋಗೋಣ ಎಂದು ತಿರ್ಮಾನಿಸಿದೆವು.  ಊಟ ಮುಗಿಸಿ ಪ್ರದರ್ಶನ ಕಲಾ ವಿಭಾಗದ ಕಡೆಗೆ ಹೊರೆಟೆವು.  ಅಲ್ಲಿ ಸುಮಾರು ೩೦ ರಿಂದ ೪೦ ಜನ, ನೆಲದಮೇಲೆ ಕುಳಿತು ನೋಡಬಹುದಾದ ಒಂದು ಚಿಕ್ಕ “ಕಲಾಮೈತ್ರಿ” ಎನ್ನುವ ಸಭಾಂಗಣವಿತ್ತು.  ಅಲ್ಲಿಗೆ ಹೋದೆವು.  ಆಗಲೇ ನಾಟಕವು ಶುರು ಆಗಿತ್ತು.  ಇಬ್ಬರಿಗೂ ಕುಳಿತುಕೊಳ್ಳಲು ಜಾಗವಿರಲಿಲ್ಲ.  ಕೊನೆಗೆ ಬಾಗಿಲ ಬಳಿಯೇ ನಿಂತು ನಾಟಕ ನೋಡಿದೆವು.

ಆ ನಾಟಕದ ಹೆಸರು ಚೋರ ಚರಣದಾಸ ಎಂದು.  ನಾವು ಅಲ್ಲಿಗೆ ಹೋಗುವಷ್ಟರಲ್ಲಿ ಅದು ಪ್ರಾರಂಬವಾಗಿತ್ತು.  ಒಬ್ಬ ಕಳ್ಳ, ಸ್ವಾಮೀಜಿ ಅತ್ರ ಬಂದು “ಸ್ವಾಮಿ ನಾನು ನಿಮ್ಮ ಭಕ್ತನಾಗಬೇಕು, ನಿಮ್ಮ ಸೇವೆಯನ್ನು ಮಾಡಬೇಕು ಎಂದು ಕೇಳುತ್ತಿದ್ದ”.  ಏನು ಅರ್ಥವಾಗದಂತೆ ನಾನು ನಿಂತಿದ್ದೆ.  ನವೀನನು ಹಾಗೆ  ನಿಂತಿದ್ದ.  ಆದರೆ ನಾಟಕ ಮುಗಿದ ನಂತರ ಆ ನಾಟಕದಿಂದ ಬಂದ ಸಂದೇಶ ಮಾತ್ರ ಅದ್ಬುತವಾಗಿತ್ತು.  ಪ್ರತಿಯೊಬ್ಬರೂ ನೋಡಲೇಬೇಕಾದ ನಾಟಕ ಎಂದು ನನಗನ್ನಿಸಿತು.  ಆ ನಾಟಕದ ಸಂದೇಶ ಏನಿತ್ತು ಎನ್ನುವುದನ್ನು ಅದರ ಕೆಲವು ಸಂಧರ್ಬಗಳಿಂದ ಬಿಚ್ಚಿಡಲು ಪ್ರಯತ್ನಿಸುತ್ತೇನೆ.  ಇಲ್ಲಿ ಕೇಳಿ….

ಕಳ್ಳ ಎಂದು ಹೇಳುತ್ತಿದ್ದನಲ್ಲ, ಅವನ ಹೆಸರು ಚರಣದಾಸ ಎಂದು.  ಅವನ ಹುಟ್ಟು ಗುಣ, ಕಸುಬು, ಕಳ್ಳತನ, ಅದನ್ನು ಬಿಟ್ಟು ಬೇರೆ ಏನು ಅವನಿಗೆ ತಿಳಿದಿರಲಿಲ್ಲ.  ಕಳ್ಳತನವೇ ನನಗೆ ಶ್ರೇಷ, ಅದೇ ನನ್ನ ಕಸುಬು, ನಾನು ಒಬ್ಬ ಕಳ್ಳ ಎಂದು  ಎಲ್ಲರತ್ರನು ಹೇಳುತ್ತಿದ್ದ.  ಆದರು ಅವನಿಗೆ ಒಬ್ಬ ಸ್ವಾಮಿಜಿಯ ಸೇವೆ ಮಾಡಬೇಕು, ಅವರ ಭಕ್ತನಾಗಬೇಕೆಂದು ಆಸೆ ಇತ್ತು.  ಒಂದು ದಿನ ಒಬ್ಬ ಸ್ವಾಮಿಯ ಹತ್ತಿರ ಬಂದು, “ಸ್ವಾಮಿ ನಾನು ನಿಮ್ಮ ಶಿಷ್ಯನಾಗಬೇಕು, ನಿಮ್ಮ ಸೇವೆ ಮಾಡಬೇಕು, ಅದಕ್ಕೆ ಅನುಮತಿ ಕೊಡಿ” ಎಂದು ಕೇಳಿಕೊಂಡನು.  ಅದಕ್ಕೆ ಸ್ವಾಮಿಯು ” ಅಯ್ಯ ನಿನೊಬ್ಬ ಕಳ್ಳ, ಸುಳ್ಳುಗಾರ, ನಿನಗೆ ನನ್ನ ಶಿಷ್ಯನಾಗುವ ಯೋಗ್ಯವಿಲ್ಲ” ಎಂದು ಬೈದರು.  ಅದಕ್ಕೆ ಚರಣದಾಸ “ಇಲ್ಲ ಸ್ವಾಮಿ, ನಾನು ಕಳ್ಳನೇ ಹಾಗಿದ್ದರು ಸಹ ನಂಗೆ ನಿಮ್ಮ ಶಿಷ್ಯನಾಗಬೇಕು ಎಂಬ ಆಸೆ ಇದೆ, ಜೀವನವಿಡೀ ನಿಮ್ಮ ಸೇವೆ ಮಾಡಬೇಕು ಎಂಬ ಆಸೆಯು ಇದೆ.  ದಯವಿಟ್ಟು ನೀವು ಅನುಮತಿ ಕೊಡಿ” ಎಂದು ಕೇಳಿಕೊಂಡನು.  ಅದಕ್ಕೆ ಸ್ವಾಮಿಯು ” ಓ ಹಾಗೋ ನೀನು ನನ್ನ ಶಿಷ್ಯನಾಗಬೇಕಿದ್ದರೆ, ನನ್ನ ಸೇವೆ ಮಾಡಬೇಕೆಂದಿದ್ದರೆ, ನನಗೊಂದು ಪ್ರಮಾಣ ಮಾಡಬೇಕು” ಎಂದರು.  ಅದಕ್ಕೆ ಚರಣದಾಸ “ಒಂದೆನ್ ಸ್ವಾಮಿ ನಾಲ್ಕು ಪ್ರಮಾಣ ಮಾಡುವೆ” ಎಂದ.  ಅದಕ್ಕೆ ಸ್ವಾಮಿಯು ” ನಾಲ್ಕು ಪ್ರಮಾಣ! ಸರಿ ಮಾಡಪ್ಪ ಅದೇನ್ ಪ್ರಮಾಣ” ಎಂದರು. ಅದಕ್ಕೆ ಚರಣದಾಸ….

ಅ. “ನಾನು ಈ ಊರಿನಲ್ಲಿ ಆನೆ ಮೇಲೆ ಸವಾರಿ ಹೋಗುವುದಿಲ್ಲ.

ಆ . ಬಂಗಾರದ ತಟ್ಟೆಯಲ್ಲಿ ಊಟ ಮಾಡುವುದಿಲ್ಲ.

ಇ.   ಈ ಊರಿನ ಜನರೇ ಆಗಲಿ, ರಾಣಿಯೇ ಅಗಲಿ ಬಂದು, ಈ ಊರಿನ ರಾಜನಾಗು ಎಂದರು  ನಾನು ಹಾಗುವುದಿಲ್ಲ.

ಈ.  ರಾಣಿಯೇ ಬಂದು ನನ್ನ ಮದುವೆ ಆಗು ಎಂದರು ನಾನು ಆಗುವುದಿಲ್ಲ”  ಎಂದು ಪ್ರಮಾಣ ಮಾಡಿದನು.

ಇದನ್ನು ಕೇಳಿದ ಸ್ವಾಮಿಯು, ಬಿಕ್ಕಿ ಬಿಕ್ಕಿ ನಕ್ಕಿ “ನಿನೊಬ್ಬ ಕಳ್ಳ, ನಿನ್ನ ಯಾರ್ ತಾನೇ ಆನೆ ಮೇಲೆ ಸವಾರಿ ಮಡುಸ್ತಾರೆ, ರಾಣಿ ನಿನ್ನ ಮುಕಾನು ನೋಡಲ್ಲ, ಅಂತದ್ರಲ್ಲಿ ಮದ್ವೆ ಅಂತೆ, ಇದೆಲ್ಲ ಬೇಡ, ನನಗೆ ನೀನು ಒಂದೇ ಒಂದು ಪ್ರಮಾಣ ಮಾತ್ರ ಮಾಡು” ಎಂದರು.  ಚರಣದಾಸ ಏನೆಂದು ಕೇಳಿದ.  ಅದಕ್ಕೆ ಸ್ವಾಮಿಯು “ಇನ್ನುಮುಂದೆ ನಾನು ಎಂದಿಗೂ ಸುಳ್ಳು ಹೇಳುವುದಿಲ್ಲ ಎಂದು ಪ್ರಮಾಣ ಮಾಡು” ಎಂದರು.  ಇದಕ್ಕೆ ಚರಣದಾಸ ಮೊದಲು ಒಪ್ಪದಿದ್ದರೂ, ಸ್ವಾಮಿಯ ಅಜ್ಞೆಮೇಲೆ ಒಪ್ಪಿ, ಆ ಒಂದು ಪ್ರಮಾಣ ಮಾಡಿದನು.

ಇದು ಅವರಿಬ್ಬರ ನಡುವೆ ನಡೆದ ಮಾತುಕತೆ, ಇನ್ನುಮುಂದೆ ಯಾವತ್ತು ಸುಳ್ಳುಹೆಳುವುದಿಲ್ಲ ಎಂದು ಪ್ರಮಾಣ ಮಾಡಿದ ಚರಣದಾಸ, ತನ್ನ ಕಸುಬು ಕಳ್ಳತನ ಮಾತ್ರ ಬಿಡಲಿಲ್ಲ.  ಸುಳ್ಳು ಹೇಳದೇನೆ ಕಳ್ಳತನ ಮಾಡುತ್ತಿದ್ದ, ಸಿಕ್ಕಿಕೊಂಡಾಗ ಕೂಡ ಸುಳ್ಳು ಹೇಳದೆ ನಿಜವನ್ನೇ ಹೇಳುತಿದ್ದ.

ಒಂದು ದಿನ ಆ ರಾಜ್ಯದ ರಾಜರ ಆಸ್ತಾನದ ಕಜಾನೆಗೆ ಕಳ್ಳತನಕ್ಕೆಂದು ಹೊರಟ.  ಮಂತ್ರಿಯಾ ಮಾರುವೇಷದಲ್ಲಿ ಹೋಗಿ ಕಜಾನೆಯಲ್ಲಿದ್ದ, ಎಷ್ಟೊಂದು ಚಿನ್ನದ ನಾಣ್ಯದಲ್ಲಿ ಬರಿ ಐದು ನಾಣ್ಯಗಳನ್ನು ಕಳ್ಳತನ ಮಾಡಿಕೊಂಡು ಬಂದ.  ಮರುದಿನ ಮಂತ್ರಿಯು ಕಜಾನೆ ಪರೀಕ್ಷೆಗೆ ಅಲ್ಲಿರುವ ಕಾವಲುಗಾರನನ್ನು ಕರೆದು ಕಜಾನೆಯಲ್ಲಿದ್ದ ನಾಣ್ಯಗಳನ್ನು ಎಷ್ಟಿದೆ ಎಂದು ಎಣಿಸಿ ಬಾ ಎಂದ.  ಅವನು ಒಳಗೆ ಹೋಗಿ ಎಣಿಸಿದಾಗ ಐದು ನಾಣ್ಯಗಳು ಕಳ್ಳತನವಾಗಿವೆ ಎಂದು ತಿಳಿಯಿತು.  ಇನ್ನು ಐದು ನಾಣ್ಯವನ್ನು ಅವನೇ ಎತ್ತಿಕೊಂಡು, ಹೊರಗೆ ಹೊಡಿಬಂದು ಓಟ್ಟು ಹತ್ತು ನಾಣ್ಯಗಳು ಕಳ್ಳತನವಾಗಿವೆ ಎಂದು ಜೋರಾಗಿ ಕೂಗಿ ಮಂತ್ರಿಗೆ ತಿಳಿಸಿದ.  ಈ ವಿಷಯ ಕಾಡ್ಗಿಚ್ಚಿನಂತೆ ಹಬ್ಬಿ ರಾಣಿಗೂ ತಿಳಿಯಿತು.  ರಾಣಿಯು ಮಂತ್ರಿಯನ್ನು ಕರೆದು ತರಾಟೆ ತೆಗೆದುಕೊಂಡು ಕಳ್ಳರು ಯಾರು ಎಂಬುದನ್ನು ಬೇಗ ಹುಡುಕಿಸಿ ಎಂದು ಹೇಳಿದಳು.  ಕೊನೆಗೆ ಚರಣದಸನೆ ಕಳ್ಳ ಎಂದು ಗೊತ್ತಾಗಿ ಅವನ್ನನ್ನು ಸೈನಿಕರು ಎಳೆತಂದು ರಾಣಿಯ ಮುಂದೆ ನಿಲ್ಲಿಸಿದರು.  ರಾಣಿಯು ಯಾಕೆ ಕಳ್ಳತನ ಮಾಡಿದೆ? ಎಷ್ಟು ನಾಣ್ಯ ಕದ್ದೆ ಎಂದು ಕೇಳಿದ್ದಕ್ಕೆ, ಚರಣದಾಸ ನನ್ನ ಕಸುಬು ಕಳ್ಳತನ, ನಾನು ಐದು ನಾಣ್ಯ ಕದ್ದೆ ಎಂದು ನಿಜ ಏನಿತ್ತು ಅದನ್ನು ಹೇಳಿದ.  ರಾಣಿಗೆ ಆಶರ್ಯ! ಏನಿದು ಕಳ್ಳನಾದರು ನಿಜವನ್ನು ಒಪ್ಪಿಕೊಳ್ಳುತ್ತಿದ್ದನಲ್ಲ, ಆದರು ರಾಣಿಯು ಸಿಟ್ಟಿನಿಂದ ಒಟ್ಟು ಹತ್ತು ನಾಣ್ಯ ಕಳುವಾಗಿರುವುದು, ಇನ್ನು ಐದು ನಾಣ್ಯ ಎಲ್ಲಿ ಎಂದು ಕೇಳಿದಳು.  ಅಂತು ಇಂತೂ ಕೊನೆಯದಾಗಿ ಕಜಾನೆಯ ಕಾವಲುಗಾರ ಇನ್ನು ಐದು ನಾಣ್ಯ ಕದ್ದಿರುವುದು ಎಂದು ರಾಣಿಗೆ ತಿಳಿಯಿತು.

ರಾಣಿಯು ಕಾವಲುಗಾರನಿಗೆ ಶಿಕ್ಷೆ ಕೊಟ್ಟು, ಚರಣದಾಸನ ನಿಜವಂತಿಕೆಯೆನ್ನು ಮೆಚ್ಚಿ, ಅವನು ಕದ್ದ ಐದು ನಾಣ್ಯವನ್ನು ಅವನಿಗೆ ಬಹುಮಾನವಾಗಿ ನೀಡಿದಳು.  ಅದಕ್ಕೆ ಚರಣದಾಸ, ಇಲ್ಲ ಅದು ಬಹುಮನವಲ್ಲ, ನನ್ನ ಸಂಪಾದನೆ ಅದು, ನನ್ನ ಕಸುಬಿನಿಂದ ನಾನು ಸಂಪಾದಿಸಿತ್ತು, ನಿಮ್ಮ ಬಹುಮನವೇನು ನನಗೆ ಬೇಕಿಲ್ಲ ಎಂದು ಹೇಳಿ ಅಲ್ಲಿಂದ ಹೊರಟುಹೋದನು.

ಆದಿನವೆಲ್ಲ ಯೋಚಿಸಿದ ರಾಣಿಯು ಇಷ್ಟೊಂದು ಸತ್ಯವಂತನಾದವನು ನಮ್ಮ ರಾಜ್ಯದಲ್ಲಿ ಇರುವನಲ್ಲ ಎಂದು ತಿಳಿದು, ಅವನಿಗೆ ಸನ್ಮಾನ ಮಾಡಬೇಕೆಂದು ಯೋಚಿಸಿದಳು.  ಮರುದಿನ ರಾಣಿಯು ತನ್ನ ಸೈನಿಕರನ್ನು ಕರೆದು, ಚರಣದಾಸ ಎಲ್ಲೆ ಇದ್ದರು, ಆತನನ್ನು ಅಲ್ಲಿಂದಲೇ ಆನೆಮೇಲೆ ಮೆರವಣಿಗೆ ಮಾಡಿಸಿ ಅರಮನೆಗೆ ಕರೆ ತನ್ನಿ ಎಂದಳು.  ಸ್ವಲ್ಪ ಹೊತ್ತಿನ ನಂತರ ಇಬ್ಬರು ಸೈನಿಕರು ಚರಣದಾಸನನ್ನು ಗಟ್ಟಿಯಾಗಿ ಹಿಡಿದು ಪ್ರಾಣಿಯಂತೆ ಎಳೆತಂದು ನಿಲ್ಲಿಸಿದರು.  ಚರಣದಾಸ ತನ್ನ ಸ್ವಾಮಿಗೆ ಆನೆಮೇಲೆ ಎಂದಿಗೂ ಸವಾರಿ ಮಾಡುವುದಿಲ್ಲ ಎಂದು ಮಾತು ಕೊಟ್ಟಿದ್ದನಂತೆ, ಅದಕ್ಕೆ ಅವನು ಸವಾರಿ ಮಾಡುವುದಕ್ಕೆ ನಿರಾಕರಿಸಿದನು ಎಂದು ಸೈನಿಕರು ರಾಣಿಗೆ ತಿಳಿಸಿದರು.  ಇದನ್ನು ತಿಳಿದ ರಾಣಿಯು ಹೋಗಲಿ ಬಿಡಿ ಅವನಿಗೆ ಅರಮನೆಯ ಸತ್ಕಾರವನ್ನು ನಿಡೋಣ ಎಂದು, ಅವನಿಗೆ ಬಂಗಾರದ ತಟ್ಟೆಯಲ್ಲಿ ಊಟ ಕೊಟ್ಟಳು.  ಬಂಗಾರದ ತಟ್ಟೆಯಲ್ಲಿ ಊಟಮಾಡುವುದಿಲ್ಲ ಎಂದು ಸ್ವಾಮಿಗೆ ಮಾತು ಕೊಟ್ಟಿದ್ದ ಚರಣದಾಸ, ಅದನ್ನು ನಿರಾಕರಿಸಿದನು.  ಇಷ್ಟೊಂದು ಸತ್ಯವಂತಿಕೆ, ಮಾತು ಕೊಟ್ಟಿದ್ದನ್ನು ಊಳಿಸಿಕೊಳ್ಳುವ ಗುಣ, ಎಲ್ಲವನ್ನು ನೆರವಾಗಿ ನುಡಿಯುವ ಬುದ್ದಿಯನ್ನು ನೋಡಿ, ರಾಣಿ ಮನಸೋತು, ಚರಣದಾಸ ನನ್ನ ಮದುವೆಯಾಗು, ಈ ರಾಜ್ಯದ ರಾಜನಾಗು ಎಂದು ಗೋಗರೆದು ಕೇಳಿಕೊಂಡಳು.  ಆದರೆ ಚರಣದಾಸ ಇದ್ಯಾವುದಕ್ಕೂ ಒಪ್ಪಲಿಲ್ಲ. ತನ್ನ ಸ್ವಾಮಿಗೆ ಮಾತು ಕೊಟ್ಟಿದ್ದೇನೆ.  ಆದ್ದರಿಂದ ಎನನ್ನು ಒಪ್ಪಲಾರೆ ಎಂದನು.  ಕೊನೆಗೆ ತನ್ನ ಬಯಕೆಯಂತೆ ಏನು ಆಗಲಿಲ್ಲವೆಂದು ಆಕ್ರೋಶದಿಂದ ಚರಣದಾಸನನ್ನು ಕೊಲ್ಲಲು ಸೈನಿಕರಿಗೆ ಅಜ್ಞಾಪಿಸಿದಳು.

——

ಇನ್ನು ನಾನೇನು ಹೇಳಬೇಕಿಲ್ಲ ಈ ನಾಟಕದಲ್ಲಿ ಬರುವ ಸಂದೇಶ ಏನೆಂಬುದು ನಿಮಗೆ ಗೊತ್ತಾಗಿರಬೇಕು.  ನನಗೆ ಅನ್ನಿಸಿದ ಪ್ರಕಾರ, ಒಬ್ಬ ಮನುಷ್ಯ ತನ್ನ ಜೀವನದಲ್ಲಿ ಒಂದು ಒಳ್ಳೆಯ ಬದಲಾವಣೆಯನ್ನು ಕಂಡುಕೊಂಡರೆ, ಅವನು ಅವನ ಜೀವನದಲ್ಲಿ ಕಲ್ಪನೆಗೂ ಬಾರದ, ಕನಸಿಗೂ ಬಾರದ ಓಳ್ಳೆಯ ಸಂದರ್ಭಗಳು, ದಿನಗಳು ಅವನ ಮುಂದೆ ಬಂದು ನಿಲ್ಲುತ್ತವೆ.  ಅವನ್ನನ್ನು ಉತ್ತುಂಗಕ್ಕೆ ಕರೆದುಕೊಂಡು ಹೋಗುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ,  ಈ ನಾಟಕದಲ್ಲೂ ಕೂಡ ಚರಣದಾಸ ಒಬ್ಬ ಹುಟ್ಟು ಕಳ್ಳ, ಸುಳ್ಳುಗಾರ, ಅವನು ಹೇಗೆ ಆನೆ ಮೇಲೆ ರಾಜ್ಯ ಪೂರ್ತಿ ಸವಾರಿ ಮಾಡಬಹುದು! ರಾಣಿ ಹೇಗೆ ಅವನ ಹತ್ತಿರ ಬಂದು ನನ್ನನ್ನು ಮದುವೆಯಗುವಿಯ ಎಂದು ಕೇಳಬಹುದು!! ಇನ್ನು ಬಂಗಾರದ ತಟ್ಟೆ, ರಾಜ ಆಗುವುದು, ಇದ್ಯಾವುದು ಅವನು ಕನಸು ಕಾಣುವುದಕ್ಕೂ ಆಗುವುದಿಲ್ಲ.  ಆದರೆ ಅವನು ಇನ್ನು ಮುಂದೆ ಸುಳ್ಳು ಹೇಳುವುದಿಲ್ಲ ಎಂದು ಪ್ರಮಾಣ ಮಾಡಿ, ಹಾಗೆ ನೆಡೆದು ಕೊಂಡಾಗ, ಅವನ ಕನಸಿಗೂ ಬಾರದ ಸಂದರ್ಬಗಳೆಲ್ಲ, ಅವನ ಕಣ್ಣಮುಂದೆಯೇ ನಿಜವಾಗಿ ಬಂದವು.  ಇದನ್ನು ಪುಷ್ಟಿಕರಿಸುವ ನೈಜ ನಿದರ್ಶನಗಳು ನಮ್ಮ ಸಮಾಜದಲ್ಲಿ ಎಷ್ಟೊಂದು ಸಿಗುತ್ತವೆ.

ಇದ್ ಬಿಡಿ, ನಮ್ಮ ಕಾಲೇಜಿನ ಕೊನೆಯ ದಿನಗಳಿಗೆ ಬರುವ, ಅಂತು ಇಂತೂ ಎರಡು ದಿನ ನಾನು ನವೀನ, ಚಂದ್ರಶೇಕರ್ (ಎರಡನೆ ದಿನ ಬಂದ) ಬೌತಶಾಸ್ತ್ರ ವಿಭಾಗದೊರು ಅನ್ನೋದನ್ನೇ ಮರೆತು ಪ್ರದರ್ಶನ ಕಲಾ ವಿಭಾಗದ ಎಲ್ಲ ನಾಟಕವನ್ನು ನೋಡಿ ಮುಗಿಸಿದೆವು.

ಬೌತಶಾಸ್ತ್ರ ವಿಭಾಗದಲ್ಲಿ ಎರಡು ವರ್ಷದಲ್ಲಿ, ಏನೇನು ನಾವು ಕಲ್ತವೋ ಗೊತ್ತಿಲ್ಲ… ಆದ್ರೆ ನಾಟಕ, ಕಾಡು ಸುತ್ತೋದು, ಲಗೋರಿ, ಗಿಡ ನೆಡೋದು ಅದು ಇದು ಅಂತ ಏನೇನೊ ಮಾಡಿದೋ ಅಲ್ವ ಅನ್ಕೊಂಡಿ ಮೂರ್ ಜನನು ಯುನಿವೆರ್ಸಿಟಿ  ಬಸ್ ಅತ್ತಕೆ ನೆಡ್ಕೊಂಡಿ ಹೋದೋ….

-ವಿಶ್ವಕೀರ್ತಿ ಎಸ್, 02-07-2012.