ಕನ್ನಡದ ಮೊದಲ ಶಬ್ದಕೋಶ

IMG_5185 copyವಿಶ್ವದ ಎಲ್ಲಾ ಭಾಷೆಗಳಿಗೆ ಹೋಲಿಸಿದರೆ ಕನ್ನಡವು ಅತ್ಯಂತ ಶ್ರೀಮಂತ ಭಾಷೆ.  ಜಗತ್ತಿನ ಭಾಷೆಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವ ಸಾಮರ್ಥ್ಯ ಕನ್ನಡ ಭಾಷೆಗಿದೆ.  ಕನ್ನಡದಲ್ಲಿರುವ ವಚನ ಸಾಹಿತ್ಯವನ್ನು ಬೇರೆ ಯಾವ ಭಾಷೆಯಲ್ಲಿಯೂ ಕಾಣಲು ಸಾದ್ಯವಿಲ್ಲ.  ವಿಶಿಷ್ಟವಾದ ಯಕ್ಷಗಾನ ಕಲೆಯಲ್ಲಿ ೪೫೦೦ಕ್ಕು ಅಧಿಕ ಪ್ರಸಂಗಗಳನ್ನು ಕಾಣಬಹುದು.                ಇದು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಹೆಗ್ಗಳಿಕೆ ಎಂದು ನಾಡೋಜ ಪ್ರಶಸ್ತಿ ಪುರಸ್ಕೃತ ದೇ ಜವರೇಗೌಡರವರು ಕಳೆದ ತಿಂಗಳು ಒಂದು ಸಮಾರಂಭದಲ್ಲಿ ಹೇಳಿದರು.  ಹೌದು ಭಾರತ ಮತ್ತು ಜಗತ್ತಿನ ಅತ್ಯಂತ ಪ್ರಬುದ್ಧ ಭಾಷೆಗಳಿಗೆ ಮತ್ತು ಅದರ ಸಾಹಿತ್ಯಗಳಿಗೆ ಹೋಲಿಸಿದರೆ, ಕನ್ನಡ ಭಾಷೆ ಮತ್ತು ಸಾಹಿತ್ಯವು ಅದರ ಮಟ್ಟಿಗೆ ಹೋಲಿಕೆಯಾಗುವುದರಲ್ಲಿ ಸಂದೇಹವಿಲ್ಲ.  ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ, ಬೇರೆ ಬೇರೆ ಕಾಲಘಟ್ಟದಲ್ಲಿ ಅಷ್ಟೇ ವಿಶೇಷತೆ ಮತ್ತು ಪ್ರಾಮುಕ್ಯತೆ ಇಂದ ಬೆಳೆಸಿಕೊಂಡು ಬರಲಾಗಿದೆ.  ಕನ್ನಡ ಭಾಷೆಯಲ್ಲಿರುವ ಅದ್ಬುತ ಸಾಹಿತ್ಯ ಭಂಡಾರಕ್ಕೆ ಸಾವಿರಾರು ಸಾಹಿತಿಗಳ ಪ್ರೀತಿಯ ಶ್ರಮವಿದೆ.  ಮೈಸೂರು ಕನ್ನಡ, ಮಂಗಳೂರು ಕನ್ನಡ, ದಾರವಾಡ ಕನ್ನಡ ಮತ್ತು ಹುಬ್ಬಳ್ಳಿ ಕನ್ನಡ ಎಂದು ವಿವಿಧ ರೀತಿಯಲ್ಲಿ ಪ್ರೀತಿಭರಿತವಾಗಿ ಮಾತನಾಡುವ ಭಾಷೆ ಕನ್ನಡ.  ಇಂತಹ ಶ್ರೀಮಂತ ಭಾಷೆಯನ್ನು ಮಾತನಾಡುವ ಜನ ನಾವು ಎಂದು ಹೇಳುವುದಕ್ಕೆ ಬಹಳ ಹೆಮ್ಮೆಯಿದೆ.

ಇಂದು ನಾನು ಹೇಳ ಬಯಸಿರುವ ವಿಚಾರ ಒಬ್ಬ ಜರ್ಮನ್ ದೇಶದ ಕ್ರೈಸ್ತ ಪೂರೂಹಿತನದು.  ಇವರು ಹುಟ್ಟಿದ್ದು ೭ ಏಪ್ರಿಲ್ ೧೮೩೨ರಂದು.  ತಂದೆ ಕ್ರೈಸ್ತ ಪುರೋಹಿತರಾದ್ದರಿಂದ, ತಂದೆಯ ದಾರಿಯಲ್ಲೇ ಇವರು ನೆಡೆದು ಒಬ್ಬ ಪರಿಣಾಮಕಾರಿ ಕ್ರೈಸ್ತ ಪೂರೂಹಿತರಾದರು.  ಆಗತಾನೇ ದಕ್ಷಿಣ ಭಾರತದಲ್ಲಿ ಕ್ರೈಸ್ತರು ಧರ್ಮ ಪ್ರಚಾರಕ್ಕೆಂದು ಬೆಸಲ್ ಮಂಡಲಿ (Basel Mission)ಯ ಒಂದು ಉಪಶಾಖೆಯನ್ನು ಕರ್ನಾಟಕದ ಮಂಗಳೂರಿನಲ್ಲಿ ಪ್ರಾರಂಬ ಮಾಡಿದರು.  ಇಲ್ಲಿ ಕೆಲಸ ಮಾಡಲು ಒಬ್ಬ ಪರಿಣಾಮಕಾರಿ ಧರ್ಮ ಪ್ರಚಾರಕರು ಬೇಕಾಗಿದ್ದರು.  ಇದೆ ಸಮಯದಲ್ಲಿ (೧೮೫೩) ಬೆಸಲ್ ಮಂಡಲಿಯು ಇವರನ್ನು ಭಾರತಕ್ಕೆ ಕರೆಸಿಕೊಂಡಿತು.  ಇವರ ಹೆಸರು ರೇವರೆಂಡ್ ಫರ್ಡಿನಾಂಡ್ ಕಿಟೆಲ್.  ಹಾಗೆ ಭಾರತಕ್ಕೆ ಬಂದ ಇವರು ಸ್ಥಳೀಯ ಭಾಷೆಯಾದ ಕನ್ನಡವನ್ನು ಕಲಿತು, ಅದರಲ್ಲಿ ಧರ್ಮ ಪ್ರಚಾರಕ್ಕೆ ನಿಂತರು.  ಧರ್ಮಪ್ರಚಾರದ ಕೆಲಸದಲ್ಲಿ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಮನಗಂಡು, ಕನ್ನಡ ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಆಳವಾಗಿ ತಿಳಿದುಕೊಂಡರು.  ಬೇರೆ ದೇಶದವರಾದರು ಕನ್ನಡ ಭಾಷೆಯ ಶ್ರೀಮಂತಿಕೆ, ಅವರನ್ನು ಕನ್ನಡದೊಳಗೆ ಕಟ್ಟಿಹಾಕಿತ್ತು.  ಈಗಿನ ಜನರು (ನನ್ನನ್ನು ಸೇರಿಸಿಕೊಂಡು) ಕನ್ನಡ ನಾಡಲ್ಲೇ ಹುಟ್ಟಿ, ಆಡಿ ಬೆಳೆದು ದೊಡ್ಡವರಾದರು ಕನ್ನಡದ ಕಥೆ, ಜನ, ಕವಿ, ಸಾಹಿತ್ಯ, ಯಾವುದರ ಅರಿವು ಇರುವುದಿಲ್ಲ ಎನ್ನುವುದು ನಿಜವಾಗಲೂ ನಾಚಿಕೆಗೇಡಿನ ಸಂಗತಿ.  ಆದರೆ ವಿದೇಶಿಯೊಬ್ಬರು ಕನ್ನಡವನ್ನು ಕಲಿತು, ಅದರ ಸಾಹಿತ್ಯದಲ್ಲಿ ಮಗ್ನರಾಗುವುದೆಂದರೆ, ಅದು ಕನ್ನಡ ಭಾಷೆಯ ಶ್ರೀಮಂತಿಕೆಯಲ್ಲದೆ ಮತ್ತೇನು.  ಕನ್ನಡ ಭಾಷೆಮೇಲೆ ಇಷ್ಟೊಂದು ಪ್ರೀತಿ ಬೆಳೆಸಿಕೊಂಡ ಕಿಟೆಲ್,  ಕನ್ನಡ-ಇಂಗ್ಲೀಷ್ ಶಬ್ದಕೋಶವನ್ನು ಬರೆಯಲು ಮುಂದಾಗುತ್ತಾರೆ.  kannada sabdakosha

kittel0001
ಡಾ. ಫರ್ಡಿನಾಂಡ್ ಕಿಟೆಲ್ (೧೮೩೨-೧೯೦೩)

ಮಂಗಳೂರು, ದಾರವಾಡ, ಮಡಿಕೇರಿ ಮತ್ತು ಹಲವು ಕಡೆಗಳಲ್ಲಿ ಅಲೆದಾಡಿ, ಆಗಿನ ಕನ್ನಡ ಪಂಡಿತರ ಸಲಹೆಯನ್ನು ಪಡೆದು ಕನ್ನಡದ ಮೊದಲ ಶಬ್ದಕೋಶ (ಕನ್ನಡ-ಇಂಗ್ಲೀಷ್ ನಿಘಂಟು)ವನ್ನು ೧೮೯೪ರಲ್ಲಿ ಬೆಸಲ್ ಮಂಡಲಿ ವತಿಯಿಂದ ಮುದ್ರಿಸುತ್ತಾರೆ.  ಕಿಟೆಲ್ ಕನ್ನಡ ಭಾಷೆಯಲ್ಲದೆ ತಮಿಳು, ತೆಲುಗು ಭಾಷೆಗಳನ್ನು ಕರಗತ ಮಾಡಿಕೊಂಡಿದ್ದರು.  ಈ ಶಬ್ದಕೋಶದಲ್ಲಿ ಸುಮಾರು ೭೦ ಸಾವಿರ ಕನ್ನಡ ಪದಗಳಿಗೆ, ಅದರ ಇಂಗ್ಲೀಷ್, ತಮಿಳು, ತೆಲುಗು ಅರ್ಥಗಳನ್ನು ಮುದ್ರಿಸಲಾಗಿತ್ತು.  ಇದು ಕನ್ನಡ ಭಾಷೆಗೆ ಮೊಟ್ಟ ಮೊದಲ ಶಬ್ದಕೋಶವಾಗಿತು.  ಇಂದಿಗೂ ಈ ಶಬ್ದಕೋಶ ಕಿಟೆಲ್ ನಿಘಂಟು ಎಂದು ಬಳಸಲಾಗುತ್ತಿದೆ.  ಜರ್ಮನ್ ವಿಶ್ವವಿದ್ಯಾಲಯವು ಕಿಟೆಲ್ ರವರ ಈ ಕೆಲಸವನ್ನು ಗುರುತಿಸಿ,  ಅವರಿಗೆ ಡಾಕ್ಟರೇಟ್ ಪದವಿಯನ್ನು ನೀಡಿತು.  ಬಹುಶಃ ಇದು ಕನ್ನಡ ಭಾಷೆಗೆ ಸಂದ ಮೊದಲ ಡಾಕ್ಟರೇಟ್ ಎಂದು A V ನರಸಿಂಹಮೂರ್ತಿ (ಪುರಾತನ ಇತಿಹಾಸ ಮತ್ತು ಪ್ರಾಚೀನ ವಸ್ತುಶಾಸ್ತ್ರದ ವಿಶ್ರಾಂತ ಪ್ರಾದ್ಯಾಪಕರು, ಮೈಸೂರು ವಿಶ್ವವಿದ್ಯಾಲಯ) ಹೇಳಿದ್ದಾರೆ.  ಅಲ್ಲಿಯವರೆಗೂ ತಾಳೆಗರಿಗಳ ಮೇಲೆ ಇದ್ದ ಕನ್ನಡದ ಬಹುದೊಡ್ಡ ವ್ಯಾಕರಣ ಗ್ರಂಥಗಳಾದ ಕೇಶಿರಾಜನ ‘ಶಬ್ದಮಣಿದರ್ಪಣ’ ಮತ್ತು ನಾಗವರ್ಮನ ‘ಚಂದೊಂಬದಿ’ ಯನ್ನು ಸಿದ್ದಪಡಿಸಿ ಮುದ್ರಿಸಿದ ಕೀರ್ತಿಯು ಕಿಟೆಲ್ ಗೆ ಸೇರುತ್ತದೆ.  ಫರ್ಡಿನಾಂಡ್  ಕಿಟೆಲ್ ರನ್ನು ಜರ್ಮನ್ ದೇಶದವರು ನೆನಪಿಸಿಕೊಳ್ಳುತ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ಕನ್ನಡ ದೇಶದಲ್ಲಿ (ರಾಜ್ಯ) ಅವರು ಅಜರಾಮರರಾಗುತ್ತಾರೆ.  ಕನ್ನಡ ಭಾಷೆಗೆ ಇಷ್ಟೊಂದು ಅಪಾರ ಕೊಡುಗೆ ನೀಡಿದ ಕಿಟೆಲ್ ರನ್ನು, ಕನ್ನಡದ ಜನರು ಎಂದೆಂದಿಗು ಮರೆಯಲು ಸಾದ್ಯವಿಲ್ಲ.  ಕಿಟೆಲ್ ರ ಕನ್ನಡದ ಪ್ರೀತಿ, ಕನ್ನಡ ಭಾಷೆಯ ಶ್ರೀಮಂತಿಕೆ ತೋರಿಸುವ ಒಂದು ಅಧ್ಯಾಯವಾಗುವುದರಲ್ಲಿ ಸಂದೇಹವೆ ಇಲ್ಲ.  ಕನ್ನಡ ನಾಡಿನ ಜನರೆಲ್ಲರೂ ಕಿಟೆಲ್ ಗೆ ಚಿರರುಣಿ.

ಇನ್ನೂ ಇಪ್ಪತ್ತೊಂದನೆ ಶತಮಾನಕ್ಕೆ ಬರುವ.  ಈಗಿರುವ ಸಂದರ್ಭವೇ ಬೇರೆ.  ಇದು ಕನ್ನಡ ಅಳಿವು ಉಳಿವಿನ ಪ್ರಶ್ನೆ!  ಕನ್ನಡದ ಶಾಲೆಗಳೆಲ್ಲವನ್ನು ಇಂಗ್ಲೀಷ್ ಶಾಲೆಯಾಗಿ ಮಾರ್ಪಾಡಿಸುತ್ತೇವೆ ಎಂದು ಹಿಂದಿನ ಸರ್ಕಾರ ಆದೇಶ ಹೊರಡಿಸಿ ಬಹಳ ಸುದ್ದಿ ಮಾಡಿದ್ದು ನಮಗೆಲ್ಲರಿಗೂ ಗೊತ್ತಿರುವ ವಿಷಯ.  ಒಂದು ವೇಳೆ ಕಿಟೆಲ್ ಇಂದಿಗೆ ಬದುಕಿದ್ದರೆ, ಅವರು ಬೆಂಗಳೂರಿಗೆ ಬಂದಿದ್ದರೆ, ತಮ್ಮ ಇಂಗ್ಲೀಷ್ ಜ್ಞಾನವನ್ನು ಇನ್ನಷ್ಟು ಹೆಚ್ಚಿಸಿಕೊಂಡು ಹೋಗುತ್ತಿದ್ದರು ಅನ್ನಿಸುತ್ತೆ.  ಅಷ್ಟರಮಟ್ಟಿಗೆ ಕನ್ನಡ ಬೆಂಗಳೂರಿನಲ್ಲಿ (ಕರ್ನಾಟಕದಲ್ಲಿ) ಕುಗ್ಗಿದೆ ಎಂದರೆ ಏನು ತಪ್ಪಿಲ್ಲ.  ಬೀದಿ ಬೀದಿಗಳಲ್ಲಿ ಕನ್ನಡ ಭಾಷೆಯನ್ನು ಉಳಿಸಿ, ಬೆಳಸಿ ಎಂಬ ಕೂಗು ಹತ್ತಾರು ಕನ್ನಡಪರ ಸಂಘಟನೆಗಳಿಂದ ಕೇಳಿ ಬರುತ್ತಿದೆ.  ಮೊನ್ನೆ ಪ್ರಜಾವಾಣಿಯಲ್ಲಿ ‘ಮಗನೆ ಕನ್ನಡ ಶಾಲೆಗೆ ಸೇರಿಸಿದ್ದಕ್ಕೆ ನನ್ನನ್ನು ಕ್ಷಮಿಸು…’ ಎಂಬ ಲೇಖನ ಬಂದಿತ್ತು.  ಸರ್ವಾಂತರ್ಯಾಮಿಯಾಗುತ್ತಿರುವ ಇಂಗ್ಲೀಷ್ ಭಾಷೆಯು, ಕನ್ನಡ ಭಾಷೆಯವರನ್ನು ಪರಕೀಯರಾಗಿ ಮಾಡುತ್ತಿದೆ ಎಂಬ ಕೂಗು ಆ ಲೇಖನದಲ್ಲಿತ್ತು.  ಕನ್ನಡಿಗರ ಸ್ವಾಭಿಮಾನ ಮಂಕಾಗಿದೆ ಎಂದು ಕವಿ ಚನ್ನವೀರ ಕಣವಿಯವರು ಇತ್ತೀಚೆಗೆ ಕಳವಳ ವ್ಯಕ್ತಪಡಿಸಿದರು.  ಕನ್ನಡ ಮಂಕಾಗಿರುವುದು ನಿಜ, ಆದರೆ ಕನ್ನಡ ಭಾಷೆಯನ್ನು ನಶಿಸಿಹೋಗುವುದಕ್ಕೆ ಕನ್ನಡಿಗರೂ ಎಂದಿಗೂ ಬಿಡುವುದಿಲ್ಲ ಎಂಬುದು ನನ್ನ ಅನಿಸಿಕೆ.  ಕನ್ನಡ ಕನ್ನಡಿಗರ ಮಾತೃಭಾಷೆ, ಪ್ರತಿಯೊಬ್ಬ ಮನುಷ್ಯರ ಮಾತೃಭಾಷೆಗೂ ಅದರದೇ ಆದ ಶಕ್ತಿ ಇದೆ.  ನನ್ನ matrubhasheಭಾವನೆಯ ಭಾಷೆ ಕನ್ನಡ, ನನಗೆ ಸಿಟ್ಟು ಬಂದರೆ, ಸಂತೋಷವಾದರೆ ಅದನ್ನು ತೋರಿಸುವುದು ಕನ್ನಡದಲ್ಲೇ.  ನನ್ನ ಮನೆಯ ಮಾತು ಕನ್ನಡ.  ನನಗೆ ನಮ್ಮ ಊರಿನ ಕಾಫಿ ಕುಡಿದರೆ ಸಮಾಧಾನವಾಗುತ್ತದೆ ಎಂದು ಡಾ. ನಾರಾಯಣ ಮೂರ್ತಿ (ಇನ್ಫೋಸಿಸ್ ಆದ್ಯಕ್ಷರು) ರವರು ೨೦೧೧ರ ಬೆಳಗಾವಿ ವಿಶ್ವ ಕನ್ನಡ ಸಮ್ಮೇಳನದಲ್ಲಿ ಮಾತನಾಡಿದರು.  ನಿಜ ನಮ್ಮ ಭಾವನೆ, ಸಿಟ್ಟು, ಸಂತೋಷ, ಬೈಗುಳ ಎಲ್ಲವನ್ನೂ ತೋರಿಸುವುದು ಮಾತೃಭಾಷೆಯಲ್ಲೇ.  ಬೇರೆ ಭಾಷೆಯಲ್ಲಿ ಏನೇ ಓದಿದರು, ಅದರ ಅರ್ಥ ತಿಳಿಯಲು ನಮ್ಮ ಅರಿವಿಲ್ಲದೆಯೇ ನಾವು ಮಾತೃಭಾಷೆಗೆ ಮೊರೆಹೋಗಿರುತ್ತೇವೆ.  ಇದೆ ಒಂದು ಮಾತೃಭಾಷೆಗಿರುವ ಅದ್ಬುತ ಶಕ್ತಿ.  ಕನ್ನಡ ನನ್ನ ಮಾತೃಭಾಷೆ ಅಂತ ಹೇಳುವುದಕ್ಕೆ ನಿಜವಾಗಲೂ ನನಗೆ ಹೆಮ್ಮೆ ಇದೆ.  ಇತ್ತೀಚೆಗೆ ನ್ಯಾಷ್ನಲ್ ಕಾಲೇಜು ಕ್ರೀಡಾಂಗಣದಲ್ಲಿ ನೆಡೆದ ಪುಸ್ತಕ ಪರಿಷೆಯ ಸಂದರ್ಭದಲ್ಲಿ ಮಾತೃಭಾಷೆಯ ಬಗ್ಗೆ ಬರೆದ ಒಂದು ವಾಕ್ಯ ಕಣ್ಣಿಗೆ ಬಿತ್ತು (ಪಕ್ಕದ ಚಿತ್ರ).  ಕನ್ನಡಿಗರಾದ ನಾವು ನಮ್ಮ ಮಾತೃಭಾಷೆಯಾದ ಕನ್ನಡವನ್ನು ಮರೆಯಲು ಎಂದೆಂದಿಗು ಸಾಧ್ಯವಿಲ್ಲಾ!  ಈ ವರ್ಷದಲ್ಲಿ ಕನ್ನಡ ರಾಜ್ಯೋತ್ಸವದ ಜೊತೆಗೆ ದೀಪವಳಿಯು ಕೂಡಿರುವುದು ವಿಶೇಷ.  ಈ ಸಂದರ್ಭದಲ್ಲಿ ಕವಿ ಡಿ ಎಸ್ ಕರ್ಕಿ ಯವರ ಹಾಡು ಅತ್ಯಂತ ಅರ್ಥಗರ್ಭಿತವಾಗಿದೆ.  ಮನೆ ಮನೆಗಳಲ್ಲಿ, ಮನ ಮನಗಳಲ್ಲಿ ಕನ್ನಡ ದೀಪ ಹಚ್ಚಿ ಬೆಳಕು ಮೂಡಿಸಿ, ಕಲ್ಪನೆಯ ಕಣ್ಣು ಹರಿಯುವ ತನಕ ದೀಪದ ಬೆಳಕು ಬೀರಬೇಕು. ಹಿರಿಯರು ಗಳಿಸಿದ ಹೆಸರನು ಉಳಿಸಲು ಎಲ್ಲರೂ ಒಂದುಗೂಡಿ ಕನ್ನಡ ದೀಪ ಹಚ್ಚಿ ಮಾಂಗಲ್ಯ ಗೀತೆ ಹಾಡೆವು.  ಕನ್ನಡದ ದೀಪ ಎಲ್ಲೆಡೆ ಬೆಳಗಲಿ.

ಎಲ್ಲರಿಗೂ ೫೮ನೇ ಕರ್ನಾಟಕ ರಾಜ್ಯೋತ್ಸವದ ಮತ್ತು ದೀಪಾವಳಿ ಹಬ್ಬದ ಶುಭಾಶಯಗಳು.

(ಪರ್ಡಿನಾಂಡ್ ಕಿಟೆಲ್ ರ ನೆನಪಿಗೋಸ್ಕರ ಬೆಂಗಳೂರಿನ ಆಸ್ಟಿನ್ ಟೌನ್ ಅನ್ನು ಎಫ್. ಕಿಟೆಲ್ ನಗರ ಎಂದು ಮರು ನಾಮಕರಣ ಮಾಡಿರುವುದು ವಿಶೇಷ.  ಮೇಲಿರುವ ಕಿಟೆಲ್ ರ ಪ್ರತಿಮೆ ನಗರದ ಎಮ್. ಜಿ. ರಸ್ತೆಯಲ್ಲಿದೆ.)


-ವಿಶ್ವ ಕೀರ್ತಿ ಎಸ್
೦೧ ನವೆಂಬರ್ ೨೦೧೩

ಕಿಟೆಲ್ ರ ಚಿತ್ರ ಮತ್ತು ಶಬ್ದಕೋಶದ ಚಿತ್ರ: http://www.payer.de/kittel/kittel00.htm
A V ನರಸಿಂಹಮೂರ್ತಿಯವರ ಲೇಖನ : http://www.ourkarnataka.com/Articles/starofmysore/kittel09.htm

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s