ನೀ ಮಾಯೆಯೊಳಗೊ ಮಾಯೆ ನಿನ್ನೊಳಗೊ..!

ಬೆಂಗಳೂರಿನಿಂದ 80 ಕಿಲೋಮೀಟರು ಮೈಸೂರು ಮಾರ್ಗವಾಗಿ ಹೋದರೆ ಶಿವಪುರ (ಮದ್ದೂರು) ಎಂಬ ಐತಿಹಾಸಿಕ ನಗರ ಸಿಗುತ್ತದೆ (ನಮ್ಮೂರು ಕೂಡ ಮದ್ದೂರು).  ಅಲ್ಲಿಂದ ರೈಲ್ವೆ ಹಳಿ ದಾಟಿ ಹತ್ತು ಕಿಲೋಮೀಟರು ಬಂದರೆ ಬೆಸಗರಹಳ್ಳಿ ಎಂಬ ಒಂದು ಚಿಕ್ಕ ಹಳ್ಳಿ ಸಿಗುತ್ತದೆ.  ಏಪ್ರಿಲ್ ತಿಂಗಳಿನಲ್ಲಿ (16-22 ಏಪ್ರಿಲ್ 2013) ಆ ಒಂದು ವಾರ ನಾನು ಕಳೆದದ್ದು ಇದೆ ಜಾಗದಲ್ಲಿ.  ನವೋದಯ ಶಾಲೆಗೆ ಹೊಂದಿಕೊಂಡಂತೆ ಇರುವ ಶಿವಾರಗುಡ್ಡ ಮತ್ತು ವಿದ್ಯಾಪೀಠದಲ್ಲೇ, ನಾನು ಒಂದು ವಾರ ಹೊರಗಿನ ಪ್ರಪಂಚದ ಅರಿವೆ ಇಲ್ಲದಂತೆ ಇದ್ದದ್ದು.  ಡಾ. ಬೆಸಗರಹಳ್ಳಿ ರಾಮಣ್ಣ ಟ್ರಸ್ಟ್ ರವರು ಸರ್ಕಾರಿ ಶಾಲೆಯ ಮಕ್ಕಳಿಗಾಗಿ ಒಂದು ವಾರದ “ಅರಿವು ಸಂಭ್ರಮ” ಎಂಬ ಬೇಸಿಗೆ ಶಿಬಿರವನ್ನು ಆಯೋಜಿಸಿದ್ದರು. ಆ ಶಿಬಿರದಲ್ಲಿ ಮಕ್ಕಳಿಗೆ ವಿಜ್ಞಾನವನ್ನು ಹೇಳಿಕೊಡುವುದಕ್ಕೆ ನಾನು, ನನ್ನ ಸ್ನೇಹಿತರಾದ ಕಿರಣ್, ಅಶ್ವಿನಿ, ನಮ್ಮ ಸಾಮಾನು ಸರಂಜಾಮುಗಳೊಂದಿಗೆ ಬೆಸಗರಹಳ್ಳಿಗೆ ಬಂದಿದ್ದೆವು.  ಪದ್ಮ, ಉಮೇಶ್, ಅನಿಲ್, ಮಹಮ್ಮುದ್ ಮತ್ತು ಗುರು ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದ್ದು ಇಲ್ಲಿಯೇ.  ಮೊದಲ ಇಬ್ಬರು ಮಕ್ಕಳಿಗೆ ಇಂಗ್ಲೀಷ್ ಹೇಳಿಕೊಡಲು ಬಂದಿದ್ದರು, ಕೊನೆಯ ಮೂವರು ‘ಕಲೆ’ ಯನ್ನು ಕಲಿಸುವುದಕ್ಕೆ ಬಂದಿದ್ದರು.  ಪದ್ಮ ಮತ್ತು ಉಮೇಶ್ ಪ್ರತಿದಿನ ಬೆಳಗ್ಗೆ ಇಂಗ್ಲೀಷ್ ಪಾಠವನ್ನು ಮಕ್ಕಳಿಗೆ ಹೇಳಿಕೊಟ್ಟ ಮೇಲೆ ತಮ್ಮ ವೈಯಕ್ತಿಕ ಕೆಲಸದಲ್ಲಿ ಮಗ್ನರಾಗುತ್ತಿದ್ದರು.  ನಾವು ನಮ್ಮ ತರಗತಿಗಳೆಲ್ಲ ಮುಗಿದಮೇಲೆ, ಅವರ ಬಳಿ ಹೋಗಿ ಅವರನ್ನು ಮಾತಿಗೆ ಎಳೆಯುತ್ತಿದ್ದೆವು.  ಕನ್ನಡದ ಒಂದು ಸಿನಿಮಾಗೆ ಇಂಗ್ಲೀಷ್ ನ ಸಬ್-ಟೈಟಲ್ (Subtitle) ಕೊಡುವುದು ಆ ವಾರದ ಅವರ ಕೆಲಸವಾಗಿತ್ತು.  ಸಿನಿಮಾದ ಪೂರ್ತಿ ಆಡಿಯೋ ಫೈಲ್ ಅನ್ನು ಇಯರ್ ಫೋನ್ ಮುಕಾಂತರ ಕೇಳಿ, ಪ್ರತಿಯೊಂದು ಪದವನ್ನು ಇಂಗ್ಲೀಷ್ ಗೆ ಮಾರ್ಪಡಿಸುವುದು ಅವರ ಕೆಲಸವಾಗಿತ್ತು.  ಯಾವ ಸಿನಿಮಾವನ್ನು ಮಾಡುತ್ತಿದ್ದೀರಿ ಎಂದು ಕೇಳಿದಾಗ ಅವರಿಂದ ಬಂದ ಉತ್ತರ ಲೂಸಿಯಾ!

Group Photo

(ಎಡಗಡೆಯಿಂದ: ಕಿರಣ್, ಪದ್ಮ, ಉಮೇಶ್, ಅಶ್ವಿನಿ, ಮಹಮ್ಮದ್, ಗುರು, ಅನಿಲ್ ಶಿವಾರಗುಡ್ಡದ ಮೇಲೆ ತೆಗೆದ ಚಿತ್ರ )

ಬೆಳಗ್ಗೆ ಎದ್ದಿ ಕಿರಣ್ ಮನೆಗೆ ಹೋಗಬೇಕು ಎಂದು, ಬೇಗ ಬೇಗ ನನ್ನ ಎಲ್ಲ ಕೆಲಸ ಮುಗಿಸಿ ಕಿರಣ್ಗೆ ಕಾಲ್ ಮಾಡಿ ನಾನು ಹನ್ನೊಂದೂವರೆ ಹಂಗೆ ನಿಮ್ಮ ಮನೆಗೆ ಬರ್ತೀನಿ ಅಂತ ಹೇಳಿದೆ.  ಆ ದಿನ ಕಂಪ್ಯೂಟರ್ ನಲ್ಲಿ ಒಂದು ಹೊಸ ಅಪ್ಲಿಕೇಷನ್ ತುಂಬಿಸಿ, ಅದನ್ನು ಬಳಸುವುದು ಹೇಗೆ ಎಂದು ಕಲಿಯುವುದು ನಮ್ಮ ಉದ್ದೇಶವಾಗಿತ್ತು.  ಕಂಪ್ಯೂಟರ್ ಮತ್ತು ಅದಕ್ಕೆ ಬೇಕಾದ ಹಾರ್ಡ್ ಡಿಸ್ಕ್ ಎಲ್ಲವನ್ನೂ ತೆಗೆದುಕೊಂಡು ಕಿರಣ್ ಮನೆಗೆ ಹೊರಟೆ.  ರಾಜರಾಜೇಶ್ವರಿ ನಗರದಲ್ಲಿದ್ದ ಅವರ ಮನೆಗೆ ಮಲ್ಲೇಶ್ವರದಿಂದ ಹೋಗಲು ಒಂದು ತಾಸು ಬೇಕಾಯಿತು.  ಅವರ ಮನೆ ಒಳಗೆ ಹೋಗುತ್ತಿದ್ದಾಗಲೇ, ಕಿರಣ್ ಯಾವುದೋ ಒಂದು ಸಿನಿಮಾದ ವೆಬ್-ಪೇಜ್ ಮೇಲೆ ಕಣ್ಣಾಡಿಸುತ್ತಿದ್ದ.  ನಿನಗೆ ಈ ಸಿನಿಮಾದ ಬಗ್ಗೆ ಹೇಳ್ತೀನಿ ಪಕ್ಕದಲ್ಲಿ ಕುಳಿತುಕೋ ಅಂದ.  ಆ ಸಿನಿಮಾ ಬೇರೆ ಸಿನಿಮಾದ ತರ ಇರಲಿಲ್ಲ.  ಅದಕ್ಕೆ ನಿರ್ಮಾಪಕರು ಪ್ರೇಕ್ಷಕರು! ಅಂದರೆ ಪ್ರೇಕ್ಷಕರಿಂದಲೇ ನಿರ್ಮಿತವಾದ ಮೊದಲ ಭಾರತೀಯ ಸಿನಿಮವಾಗಿತ್ತು.  ಯಾರು ಬೇಕಾದರೂ ಆ ಸಿನಿಮಾಗೆ ಹಣ ಕೊಡಬಹುದಾಗಿತ್ತು.  ಕಿರಣ್ ಕೂಡ ಹಣ ಕೊಟ್ಟು, ತನ್ನ ಹೆಸರನ್ನು ಆ ವೆಬ್-ಪೇಜ್ ನಲ್ಲಿ ಮೂಡಿಸಿದ್ದ.  ಅಧಿಕೃತವಾಗಿ ಕಿರಣ್ ಕೂಡ ಆ ಸಿನಿಮಾದ ನಿರ್ಮಾಪಕನೆಂದು ನನಗೆ ಹೆಮ್ಮೆ ಮೂಡಿತ್ತು.  ಇದೊಂದು ಕನ್ನಡ ಸಿನಿಮಾ ಎಂಬುದು ಮತ್ತೊಂದು ಹೆಮ್ಮೆಯ ವಿಚಾರ.  ಸಿನಿಮಾದ ಹೆಸರು ಲುಸಿಯಾ ಎಂದು ಆ ವೆಬ್-ಪೇಜ್ ನಲ್ಲಿ ಅಚ್ಚುಕಟ್ಟಾಗಿ ಮೂಡಿತ್ತು.  ಅರೇ, ಇದು ಪದ್ಮ ಮತ್ತು ಉಮೇಶ್ ಬೆಸಗರಹಳ್ಳಿಯಲ್ಲಿ ಸಬ್-ಟೈಟಲ್ ಹಾಕುತ್ತಿದ್ದರಲ್ಲ ಅದೇ ಸಿನಿಮಾನ ಎಂದೇ.  ಅವನು ಹೌದು ಇದೆ ಆ ಲೂಸಿಯಾ ಸಿನಿಮ ಎಂದ.  ಪ್ರಪಂಚದ ಬೇರೆಡೆ ಇದು ಆಗಲೇ ಬಿಡುಗಡೆಯಾಗಿತ್ತು.  ಭಾರತದಲ್ಲಿ ಇನ್ನೂ ಬಿಡುಗಡೆಯಾಗಿರಲಿಲ್ಲ.  ಆ ದಿನವೆಲ್ಲ ನಮ್ಮ ಕೆಲಸವನ್ನು ಮರೆತು ಲೂಸಿಯಾಗೆ ಮುಡಿಪಾಗಿಟ್ಟಿದ್ದೆವು.

ಸಪ್ಟೆಂಬರ್ ಒಂಬತ್ತು, ಎಲ್ಲೆಡೆ ಗಣೇಶ ಹಬ್ಬದ ಸಂಭ್ರಮ ಮತ್ತು ಲೂಸಿಯಾ ಸಿನಿಮ ಭಾರತದಲ್ಲಿ ಬಿಡುಗಡೆಯಾಗಿ ಮೂರು ದಿನವಾಗಿತ್ತು.  ಇದರ ಜೊತೆಗೆ ಕಿರಣ್ ಹುಟ್ಟುಹಬ್ಬನು ಸೇರಿಕೊಂಡಿಬಿಟ್ಟಿತ್ತು.  ಸರಿ, ಅವನ ಮನೆಗೆ ಹೋಗುವ ಎಂದು ಹೊರಟು ನಿಂತೆ.  ಮಧ್ಯಾನ ಎರಡು ಘಂಟೆಗೆ ಅವನ ಮನೆ ಸೇರಿದ್ದೆ.  ಅವನಿಗೆ ಹುಟ್ಟು ಹಬ್ಬದ ಶುಬಾಶಯ ಹೇಳಿ ಏನು ಇವತ್ತಿನ ಪ್ಲಾನ್ ಎಂದೆ.  ಬಟ್ಟೆ ಹೊಗೆಯುವುದು ಏನಾದರೂ ಅಡಿಗೆ ಮಾಡಿ ತಿನ್ನುವುದು ಎಂದ.   ಅಡಿಗೆ ಆಮೇಲೆ ಮಾಡೋಣ ಎಂದು ಅವನ ಕಂಪ್ಯೂಟರ್ ತೆಗೆದು ನೋಡಿದೆ.  ಲೂಸಿಯಾ ಸಿನಿಮಾದ ‘ಅಭಿಪ್ರಾಯ’ ದ ಪೇಜ್ ಅವನ ಕಂಪ್ಯೂಟರ್ ಪೂರ್ತಿ ತುಂಬಿತ್ತು.  ಲಂಡನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡ ಮೊದಲ ಕನ್ನಡ ಸಿನಿಮ ಎಂಬ ವೆಬ್-ಪೇಜ್ ಪ್ರಮುಖವಾಗಿತ್ತು. ನಾನು ಥೆಟರ್ ಗೆ ಹೋಗಿ ಸಿನಿಮಾ ನೋಡಿದ್ದು ತುಂಬಾ ಕಡಿಮೆ.  ಹ್ಯಾರಿ ಪಾಟರ್ ನ ಕೊನೆಯ ಕಂತು ಬಿಡುಗಡೆಯಾದಾಗ ನವರಂಗ್ ಥೆಟರ್ ಗೆ ಹೋಗಿ 3ಡಿ ಸಿನಿಮಾ ನೋಡಿದ್ದೆ ಕೊನೆಬಾರಿ.  ಇ ಸಾರಿ ಲುಸಿಯಾ ಸಿನಿಮಾ ನೋಡೋಣ ಎಂದು ಇಬ್ಬರು ಯೋಚನೆ ಮಾಡಿ, ಮೈಸೂರು ರೋಡಲ್ಲಿರುವ ಗೋಪಾಲನ್ ಮಾಲ್ ನಲ್ಲಿ ಎರಡು ಟಿಕೆಟ್ ಖರೀದಿಸಿದೋ.

ವರ್ಷಕ್ಕೆ ಕಮ್ಮಿ ಅಂದರು ನೂರು ಸಿನಿಮಗಳು ಕನ್ನಡ ಭಾಷೆ ಒಂದರಲ್ಲೇ ತೆರೆ ಕಾಣುತ್ತವೆ.  ಕೆಲವು ಸಿನಿಮಾ ಒಳ್ಳೆಯದು ಬಂದರು, ಬಹಳಷ್ಟು ಸಿನಿಮಾ ರೀಮೇಕ್ ಸಿನಿಮಾ ಎಂಬ ಕೂಗು ಇದೆ.  ಇದೆಲ್ಲವನ್ನು ಕಂಡಾಗ ಕನ್ನಡದಲ್ಲಿ ಯಾಕೆ ಯಾರು ಸ್ವಂತಿಕೆಯಿಂದ ಸಿನಿಮಾವನ್ನು ತಯಾರಿಸುತ್ತಿಲ್ಲ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುವುದು ಸಹಜ.  ನನ್ನ ತಿಳುವಳಿಕೆಯ ಮಟ್ಟಿಗೆ ಇದಕ್ಕೆ ಉತ್ತರ ಎಂದರೆ, ಈಗಿನ ಕಮರ್ಷಿಯಲ್ ಜೀವನ ಕ್ರಮ ಮತ್ತು ಬೇಗ ಹಣ ಗಳಿಸಬೇಕೆಂಬುವ ಹಂಬಲ.  ಒಂದು ಭಾಷೆಯಲ್ಲಿ ಒಂದು ಸಿನಿಮ ಯಶಸ್ಸು ಕಂಡರೆ, ಅದನ್ನು ನಮ್ಮ ಭಾಷೆಯಲ್ಲು ತುರ್ಜುಮೆ ಮಾಡಿದರೆ ನಮಗೂ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ.  ಇ ನಂಬಿಕೆಗಳಿಂದಲೇ ಬಹಳಷ್ಟು ರೀಮೇಕ್ ಸಿನಿಮಾಗಳು ಹುಟ್ಟಿಕೊಳ್ಳುತ್ತವೆ. ರೀಮೇಕ್ ಸಿನಿಮಾ ಮಾಡುವುದು ತಪ್ಪಲ್ಲ, ಆದರೆ ರೀಮೇಕ್ ಸಿನಿಮಾಗಳು ಮಾಡುವುದರಿಂದ ನಮ್ಮ ಸ್ವಂತಿಕೆಯ ಯೋಚನಶೀಲವನ್ನು ಕಡೆಗಣಿಸುವುದು ತಪ್ಪು.  ಯಶಸ್ಸನ್ನು ಹಣದಿಂದ ಅಳೆಯುವುದು ಸಿನಿಮಾ ಜಗತ್ತಿನ ಮತ್ತೊಂದು ಕಲ್ಮಶದ ಮುಖ ಎಂದು ನನ್ನ ಅನಿಸಿಕೆ.  ಸ್ವಂತಿಕೆಯಿಂದ ತಯಾರಿಸಿದ ಸಿನಿಮಾವನ್ನು ಜನರು ತಿರಸ್ಕರಿಸುತ್ತಾರೆ ಎನ್ನುವ ಭಯ ನಿರ್ದೇಶಕರಲ್ಲಿ/ನಿರ್ಮಾಪಕರಲ್ಲಿ ಇರಬಹುದು, ಆದರೆ ಅದು ಅವರ ನಂಬಿಕೆ ಮಾತ್ರ.  ಯಾವುದೇ ಭಾಷೆಯಲ್ಲಿ ಸೃಜನಶೀಲ ಬರವಣಿಗೆಯಿಂದ ಮೂಡಿದ ಸಮೃದ್ದ ಕಥೆಯುಳ್ಳ ಸಿನಿಮಾವನ್ನು ಆ ಭಾಷೆಯ ಜನ ತಿರಸ್ಕರಿಸುವುದಿಲ್ಲ ಎಂಬುದು ನನ್ನ ಅನಿಸಿಕೆ.  ಅಂತಹ ಸಿನಿಮಾ ತೆರೆ ಕಾಣದಿದ್ದರು ಅದಕ್ಕೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಬಲವಿರುತ್ತದೆ.  ಕನ್ನಡದಲ್ಲೇ ಇದಕ್ಕೆ ಎಷ್ಟೋ ಉದಾರಣೆಗಳು ಸಿಗುತ್ತವೆ. ಲೂಸಿಯಾ ಕೂಡ ಪವನ್ ಕುಮಾರ್ ಎಂಬ ಸೃಜನಶೀಲ ಬರವಣಿಗೆಕಾರ ಹುಟ್ಟು ಹಾಕಿದ ಕಥೆ, ನಿರ್ದೇಶನ ಕೂಡ ಅವರದೇ, ಆದರೆ ನಿರ್ಮಾಪಕರು ಮಾತ್ರ ಪ್ರೇಕ್ಷಕರು!

ಲೂಸಿಯಾ ಎರಡುಗಂಟೆ ಇಪ್ಪತ್ತು ನಿಮಿಷದ ಕನ್ನಡ ಸಿನಿಮ.  ಭಾರತದ ಮೊದಲ ಪ್ರೇಕ್ಷಕ ನಿರ್ಮಿತ ಸಿನಿಮ.  ಇಲ್ಲಿ ತೆರೆ ಕಾಣುವು ಮುಂಚೆಯೇ ಬೇರೆ ದೇಶದಲ್ಲಿ ಕನ್ನಡದ ಪತಾಕೆಯನ್ನು ಹಾರಿಸಿದ ಸಿನಿಮ.  ಪೂರ್ತಿ ಸಿನಿಮ ಕ್ಯಾನನ್ 5ಡಿ (Canon 5D) ಯಲ್ಲೇ ಚಿತ್ರೀಕರಣವಾಗಿರುವುದು ವಿಶೇಷ.  ಬಹಳ ಮುಖ್ಯವೆಂದರೆ ವ್ಯಕ್ತಿ ಪ್ರಧಾನವಲ್ಲದೆ, ಕಥೆ ಪ್ರಧಾನವಾದ ಸಿನಿಮಾ ಎಂಬುದು ಇದರ ಹೆಗ್ಗಳಿಕೆ.  ‘ಕನಕದಾಸರ’ 15ನೆ ಶತಮಾನದ “ ನೀ ಮಾಯೆಯೊಳಗೊ ಮಾಯೆ ನಿನ್ನೊಳಗೊ, ನೀ ದೇಹದೊಳಗೊ ದೇಹ ನಿನ್ನೊಳಗೊ…” ಎಂಬ ವಚನದಿಂದ ಪ್ರೇರೇಪಿತವಾಗಿ ರಚಿಸಿದ ಕಥೆ ಲೂಸಿಯಾ.  ಮೇಲ್ನೋಟಕ್ಕೆ ಪ್ರೀತಿ ಪ್ರೇಮದ ಕಥೆತರನೆ ಕಾಣುವ ಸಿನಿಮ, ಬರೀ ಪ್ರೀತಿ ಪ್ರೇಮದ ಕಥೆಯಲ್ಲ.  ಪ್ರೇಕ್ಷಕರನ್ನು ಗೊಂದಲಮಯದಲ್ಲೇ ಕರೆದುಕೊಂಡು ಹೋಗುವ ‘ಕಪ್ಪು ಬಿಳುಪು ಮತ್ತು ಬಣ್ಣದ’ ಸಿನಿಮ ಕೊನೆಗೆ ಕೊಡುವ ಸಂದೇಶ  “ನಿಮ್ಮ ಚಿಕ್ಕ ಜೀವನ, ಇನ್ನೊಬ್ಬರ ದೊಡ್ಡ ಆಸೆ” (Yours Small Life is Someone’s Big Dream) ಅದ್ಬುತವಾಗಿದೆ.  ಯಾವಾಗಲಾದರೂ ಬಿಡುವು ಸಿಕ್ಕಾಗ ಒಮ್ಮೆ ಹಾಗೆ ಸಿನಿಮಾ ನೋಡಿ ಬನ್ನಿ.

Lucia-Poster

ಸಿನಿಮಾ ನೋಡುತ್ತಿದ್ದಾಗ, ಬೆಸಗರಹಳ್ಳಿಯಲ್ಲಿ ಪರಿಚಯವಾದ ಉಮೇಶ್ ಇದರಲ್ಲಿ ನಟಿಸಿರುವುದು ನೋಡಿ ಫುಲ್ ಖುಷಿಯಾಗಿದ್ದೆ.  ಸಿನಿಮಾ ನೋಡಿ ಬಂದಮೇಲೆ ನನ್ನ ಸ್ನೇಹಿತ ದೀಪಕ್ ಕೂಡ, ನಾನು ಒಂದು ಸೀನ್ ನಲ್ಲಿ ಬಂದು ಹೋಗ್ತೀನಿ ನಿನ್ ನೋಡಿದಾ ಅಂದ. ಅದನ್ನು ಗಮನಿಸಲು ಮರೆತಿದ್ದೆ.


ವಿಶ್ವ ಕೀರ್ತಿ ಎಸ್
23/09/2013

Advertisements

2 thoughts on “ನೀ ಮಾಯೆಯೊಳಗೊ ಮಾಯೆ ನಿನ್ನೊಳಗೊ..!

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s